ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹಳ್ಳಿಯೊಂದರಲ್ಲಿ ವರನ ವರ್ತನೆ ಕಂಡು ಮದುವೆಯಾಗೋದಕ್ಕೆ ವಧು ನಿರಾಕರಿಸಿದ ಘಟನೆ ನಡೆದಿದೆ.
ಈ ಹಳ್ಳಿಯಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮಕ್ಕೆ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದರು. ಮದುವೆ ಮೆರವಣಿಗೆ ಕೂಡ ಆರಂಭವಾಗಿತ್ತು. ಆದರೆ ವಧು ಈ ಮೆರವಣಿಗೆಯಲ್ಲಿ ಬರಲು ಹಿಂದೇಟು ಹಾಕಿದ್ದಾಳೆ. ಮದುವೆಗೂ ಕೂಡ ಎಲ್ಲ ತಯಾರಿಗಳನ್ನು ಮನೆಯವರು ಮಾಡಿಕೊಂಡಿದ್ದಾರೆ. ಆದರೆ ವರ ವರ್ತನೆ ನೋಡಿ ಮದುವೆ ಆಗಲು ವಧು ಒಲ್ಲೆ ಎಂದಿದ್ದಾಳೆ.
ವಧು, ವರ ಮತ್ತು ಅವನ ಸಂಬಂಧಿಕರ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾಳೆ. ಮದುವೆ ಮೆರವಣಿಗೆಗೆ ವರ ಕಡೆಯವರು ತಡವಾಗಿ ಬಂದಿದ್ದಾರೆ. ಹಾಗೂ ಕೆಲವರು ಅದರಲ್ಲಿ ಕುಡಿದಿದ್ದರು. ಜತೆಗೆ ವರನು ಪದೇ ಪದೇ ಬಿಸಿನೀರು ಕೇಳುತ್ತಿದ್ದ, ಅವನು ಹುಚ್ಚನಂತೆ ಆಡುತ್ತಿದ್ದ ಎಂದು ವಧು ದೂರಿದ್ದಾಳೆ. ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ತಮ್ಮ ಮಗನನ್ನು ಹುಚ್ಚ ಎಂದು ಕರೆದಿದ್ದಕ್ಕೆ ವರನ ಕುಟುಂಬದವರು ವಧುವಿನ ವಿರುದ್ಧ ಆಕ್ರೋಶಗೊಂಡಿದ್ದು, ದೊಡ್ಡ ಜಗಳವೇ ನಡೆದಿದೆ. ಮದುವೆಗೆ ಬಂದಿದ್ದ ಸಂಬಂಧಿಕರು ಇವರ ಜಗಳ ನೋಡಿ ಅಲ್ಲಿಂದ ಹೋಗಿದ್ದಾರೆ.
ಮದುವೆ ಮನೆಯಲ್ಲಿ ಜಗಳ ಜೋರಾಗಿರುವುದನ್ನು ಕಂಡು ಯಾರೋ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಕೊನೆಗೆ ಪೊಲೀಸರು ಮಧ್ಯೆಪ್ರವೇಶಿಸಿ, ಎರಡೂ ಕಡೆಯವರೊಂದಿಗೆ ಮಾತನಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮದುವೆಯ ಸಾಮಗ್ರಿಗಳು ಮತ್ತು ಖರ್ಚು ಮಾಡಿದ ಹಣವನ್ನು ಹಿಂದಿರುಗಿಸುವ ವ್ಯವಹಾರದ ಬಗ್ಗೆ ಎರಡೂ ಕಡೆಯವರು ರಾಜಿ ಮಾಡಿಕೊಂಡು, ಒಂದು ಒಪ್ಪಂದಕ್ಕೆ ಬಂದರು. ಈ ಘಟನೆಗೆ ಸಂಬಂಧಿಸಿದಂತೆ ಯಾರೂ ಯಾವುದೇ ಲಿಖಿತ ದೂರು ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

