Wednesday, December 10, 2025

ಇಂಡಿಗೋಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರಕಾರ: ಶೇ.10ರಷ್ಟು ವಿಮಾನಗಳ ಹಾರಾಟ ಕಡಿತ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದೇಶದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಶೇ. 60ರಷ್ಟು ಪಾಲು ಹೊಂದಿರುವ ಇಂಡಿಗೋ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟು ದೇಶಾದ್ಯಂತ ಲಕ್ಷಾಂತರ ಪ್ರಯಾಣಿಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 6 ದಿನಗಳ ಬಿಕ್ಕಟ್ಟಿನ ನಂತರ ಇದೀಗ ಪರಿಸ್ಥಿತಿ ತುಸು ಸುಧಾರಿಸಿದ್ದು, ಸಂಪೂರ್ಣ ಸಹಜ ಸ್ಥಿತಿಗೆ ಬರಲು ಇನ್ನಷ್ಟು ದಿನ ಅಗತ್ಯ ಎಂದು ಸಂಸ್ಥೆ ಹೇಳಿದೆ.

ಈ ಮಧ್ಯೆ ಕೇಂದ್ರ ಇಂಡಿಗೋ ಸಂಸ್ಥೆಗೆ ಅಂಕುಶ ಹಾಕಲು ನಿರ್ಧರಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೊದ ಕಾರ್ಯಾಚರಣೆಯಲ್ಲಿ ಶೇ. 10ರಷ್ಟನ್ನು ಕಡಿತಗೊಳಿಸಿದೆ.

ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಡಿಸೆಂಬರ್‌ 9ರಂದು ಎಂಒಸಿಎ ಕಾರ್ಯದರ್ಶಿ ಸಮೀರ್ ಸಿನ್ಹಾ ಮತ್ತು ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಅವರೊಂದಿಗೆ ಸಭೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿದಿನ 138 ಕಡೆಗೆ 2,200 ವಿಮಾನಗಳ ಸಂಚಾರ ನಡೆಸುತ್ತಿದ್ದ ಇಂಡಿಗೊಗೆ ಈ ನಿರ್ಧಾರದಿಂದ ಸುಮಾರು 200 ಸಂಚಾರ ಕಡಿತವಾಗಲಿದೆ.

ಸಚಿವ ರಾಮ್ ಮೋಹನ್ ನಾಯ್ಡು ಎಕ್ಸ್‌ ಪೋಸ್ಟ್‌:
‘ಇಂಡಿಗೊದ ಕಾರ್ಯಾಚರಣೆಯನ್ನು ಕಡಿತಗೊಳಿಸುವುದು ಅಗತ್ಯವೆಂದು ಸಚಿವಾಲಯ ಕಂಡುಕೊಂಡಿದೆ. ಇದು ವಿಮಾನಯಾನ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸಲ್‌ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕಾರ್ಯಾಚರಣೆಯ ಪೈಕಿ ಶೇಕಡಾ 10ರಷ್ಟು ಕಡಿತಗೊಳಿಸಲು ಆದೇಶಿಸಲಾಗಿದೆ.

ಈ ನಿಯಮವನ್ನು ಪಾಲಿಸಿಕೊಂಡು ಇಂಗೋ ಎಂದಿನಂತೆ ಕಾರ್ಯ ನಿರ್ವಹಿಸಲಿದೆ. ಶುಲ್ಕ ಮಿತಿ ಮತ್ತು ಪ್ರಯಾಣಿಕರ ಅನುಕೂಲ ಕ್ರಮಗಳನ್ನು ಒಳಗೊಂಡಂತೆ ಸಚಿವಾಲಯದ ಎಲ್ಲ ನಿರ್ದೇಶನಗಳನ್ನು ಪಾಲಿಸಲಾಗುತ್ತದೆ ಎಂದು ಇಂಡಿಗೋ ಹೇಳಿದೆ.

https://x.com/RamMNK/status/1998381042634563903

ಸಭೆಯ ಬಗ್ಗೆ ವಿಮಾನಯಾನ ಸಚಿವ ರಾಮ್‌ಮೋಹನ್‌ ನಾಯ್ಡು ಮಾಹಿತಿ ನೀಡಿ, ‘ಇಂದು ಮತ್ತೊಮ್ಮೆ ಇಂಡಿಗೊ ಸಿಇಒ ಪೀಟರ್ ಎಲ್ಬರ್ಸ್ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಡಿಸೆಂಬರ್ 6ರವರೆಗಿನ ಮರುಪಾವತಿ ಪೂರ್ಣಗೊಂಡಿದೆ ಎಂದು ಅವರು ದೃಢಪಡಿಸಿದರು. ಒಟ್ಟಾರೆ ಇಂಡಿಗೊ ಕಾರ್ಯಾಚರಣೆಯನ್ನು ಮೊಟಕುಗೊಳಿಸುವುದು ಅಗತ್ಯವೆಂದು ಸಚಿವಾಲಯ ನಿರ್ಧರಿಸಿದೆ’ ಎಂದು ತಿಳಿಸಿದರು.

ಇದುವರೆಗೆ 7 ದಿನಗಳಲ್ಲಿ ಇಂಡಿಗೋ ವಿಮಾನಗಳ 4,500 ಹಾರಾಟ ರದ್ದಾಗಿದೆ. ಕೇಂದ್ರದ ಸೂಚನೆಯಂತೆ ವಿಮಾನಯಾನ ಸಂಸ್ಥೆ ಟಿಕೆಟ್‌ ಹಣವನ್ನು ಪ್ರಯಾಣಿಕರ ಬ್ಯಾಂಕ್‌ ಖಾತೆಗಳಿಗೆ ವರ್ಗಾಯಿಸುತ್ತಿದೆ. ಇದುವರೆಗೆ 827 ಕೋಟಿ ರೂ.ಗಿಂತ ಅಧಿಕ ಮರು ಪಾವತಿಸಲಾಗಿದೆ.

error: Content is protected !!