ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಶಾಂತಿ ಕಂಡುಬಂದರೂ, ಒಳಗೊಳಗೆ ಅಧಿಕಾರಕ್ಕಾಗಿ ಬಣ ರಾಜಕೀಯದ ಬೇಗುದಿ ಮುಂದುವರಿಯುತ್ತಲೇ ಇದೆ. ಸಿಎಂ ಕುರ್ಚಿ ಹಂಚಿಕೆಯ ಸಂಘರ್ಷ ಹೈಕಮಾಂಡ್ ಅಂಗಳದಲ್ಲಿರುವಾಗಲೇ, ಇದೀಗ ಪ್ರತಿಷ್ಠಿತ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಆಪ್ತರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಸಹಕಾರ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಮಾಜಿ ಸಚಿವ ಕೆ.ಎನ್. ರಾಜಣ್ಣ, ಸದ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತುಮಕೂರು ಡಿಸಿಸಿ ಬ್ಯಾಂಕ್ ಪ್ರತಿನಿಧಿಯಾಗಿ ಈಗಾಗಲೇ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ರಾಜಣ್ಣ ಅವರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲವಿದೆ ಎನ್ನಲಾಗಿದೆ.
ಒಂದು ವೇಳೆ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ಸಿಗದಿದ್ದರೆ, ಪರ್ಯಾಯವಾಗಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಪಟ್ಟವನ್ನಾದರೂ ಅಲಂಕರಿಸಬೇಕು ಎಂಬುದು ರಾಜಣ್ಣ ಅವರ ಲೆಕ್ಕಾಚಾರ.
ಮತ್ತೊಂದೆಡೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಬಂಧಿ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರವಿ ಕೂಡ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಡಿಕೆಶಿ ಬಣವು ಈ ಪ್ರಭಾವಿ ಬ್ಯಾಂಕ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸರ್ವ ಪ್ರಯತ್ನ ನಡೆಸುತ್ತಿದ್ದು, ಇದು ಸಹಜವಾಗಿಯೇ ಎರಡು ಬಣಗಳ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಸಹಕಾರ ಇಲಾಖೆ ಸದ್ಯ ಮುಖ್ಯಮಂತ್ರಿಗಳ ಬಳಿಯೇ ಇರುವುದರಿಂದ ರಾಜಣ್ಣ ಅವರಿಗೆ ವರದಾನವಾಗಲಿದೆಯೇ ಅಥವಾ ಡಿಕೆಶಿ ತಮ್ಮ ಆಪ್ತನನ್ನು ಅಧ್ಯಕ್ಷ ಪೀಠದಲ್ಲಿ ಕೂರಿಸುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.



