March 11, 2026
Wednesday, March 11, 2026
spot_img

43ನೇ ವಸಂತಕ್ಕೆ ಕಾಲಿಟ್ಟ ಮೋಹಕತಾರೆ: ಐತಿಹಾಸಿಕ ಕಥೆಯೊಂದಿಗೆ ಭರ್ಜರಿ ಕಮ್‌ಬ್ಯಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಯಾಂಡಲ್‌ವುಡ್‌ನ ಮೋಹಕತಾರೆ ನಟಿ ರಮ್ಯಾ ಅವರು ತಮ್ಮ 43ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಹೊರಬಿದ್ದಿದೆ. ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದ ರಮ್ಯಾ ಅವರು, ಇದೀಗ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಕಮ್‌ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಮರಳಲು ಉತ್ಸುಕರಾಗಿರುವ ನಟಿ ರಮ್ಯಾ ಅವರು ಈಗಾಗಲೇ ಸಾಕಷ್ಟು ಉತ್ತಮ ಸ್ಕ್ರಿಪ್ಟ್‌ಗಳನ್ನು ಆಲಿಸಿದ್ದಾರೆ ಎನ್ನಲಾಗಿದೆ. ಅವರ ಮುಂದಿನ ಹೆಜ್ಜೆ ಕುತೂಹಲ ಮೂಡಿಸಿದ್ದು, ದೊರೆತ ಮಾಹಿತಿಯ ಪ್ರಕಾರ, ಅವರು ಒಂದು ಐತಿಹಾಸಿಕ ಸಿನಿಮಾದ ಸ್ಕ್ರಿಪ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ತೆರೆಯ ಮೇಲೆ ರಮ್ಯಾ ಅವರ ಹೊಸ ಅವತಾರವನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.

ರಮ್ಯಾ ಅವರು ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ‘ಅಭಿ’ (2003) ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿ ಇಡೀ ದಕ್ಷಿಣ ಭಾರತದಲ್ಲಿ ಖ್ಯಾತಿಗಳಿಸಿದರು. ಸಿನಿಮಾ ಮಾತ್ರವಲ್ಲದೆ, ಅವರು ಸಂಸದೆಯಾಗಿ ರಾಜಕೀಯ ರಂಗದಲ್ಲೂ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದಾರೆ.

ನಿರ್ಮಾಣದತ್ತ ರಮ್ಯಾ ಚಿತ್ತ

ಕೊನೆಯದಾಗಿ 2021ರಲ್ಲಿ ‘ನಾಗರಹಾವು’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಮ್ಯಾ, 2023ರಲ್ಲಿ ಬಿಡುಗಡೆಯಾದ ಯಶಸ್ವಿ ಚಿತ್ರ ‘ಹಾಸ್ಟೆಲ್ ಹುಡುಗರು’ ಮೂಲಕ ಅತಿಥಿ ಪಾತ್ರದಲ್ಲಿ ಮತ್ತೆ ತೆರೆಗೆ ಬಂದಿದ್ದರು. ಇದೀಗ ಅವರು ಕೇವಲ ನಟನೆಯಷ್ಟೇ ಅಲ್ಲದೆ, ಸಿನಿಮಾ ನಿರ್ಮಾಣ ಮಾಡಲು ಕೂಡ ತಯಾರಿ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ರಮ್ಯಾ ಅವರಿಗಾಗಿ ವಿಶೇಷ ಕಥೆ ಸಿದ್ಧಪಡಿಸಿರುವ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದರು. ರಮ್ಯಾ ಕೂಡ ತಮ್ಮ ಮುಂದಿನ ಸಿನಿಮಾ ಕಥೆಯೊಂದನ್ನು ಅಂತಿಮಗೊಳಿಸಿರುವುದಾಗಿ ಹೇಳಿಕೊಂಡಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !