ಹೊಸ ದಿಗಂತ ವರದಿ,ಬೆಳಗಾವಿ / ಹುಕ್ಕೇರಿ :
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಅವರು ತಿಗಡಿ ಪ್ರಾಥಮಿಕ ಕನ್ನಡ ಶಾಲೆಗೆ ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದರು.
ತಿಗಡಿ ಸರಕಾರಿ ಮಾದರಿ ಪ್ರಾಥಮಿಕ ಕನ್ನಡ ಶಾಲೆಗೆ ಹಠಾತ್ ಭೇಟಿ ನೀಡಿದ ಜಿಪಂ ಪರಶುರಾಮ ದುಡಗುಂಟಿ ಅವರು, ಅಡುಗೆ ಕೊಠಡಿಯ ಶುಚಿತ್ವ ಹಾಗೂ ಆಹಾರ ಗುಣಮಟ್ಟವನ್ನು ಪರಿಶೀಲಿಸಿದರು. ಬಳಿಕ ಅಕ್ಷರ ದಾಸೋಹದ ಪ್ರಧಾನಮಂತ್ರಿ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಮಧ್ಯಾಹ್ನದ ಬಿಸಿಯೂಟವನ್ನು ಶಾಲಾ ಮಕ್ಕಳೊಂದಿಗೆ ಸವಿದರು. ಕೆಲಹೊತ್ತು ಮಕ್ಕಳೊಂದಿಗೆ ಕಾಲ ಕಳೆದು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು.
ಇದೇ ವೇಳೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ದುಡಗುಂಟಿ, ವಿವಿಧ ಯೋಜನೆಗಳ ಕಡತಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿದರು. ಜೊತೆಗೆ ಅನುಷ್ಠಾನ ಹಂತದ ವಿವಿಧ ಕಾಮಗಾರಿಗಳನ್ನೂ ಸಹ ವೀಕ್ಷಿಸಿದರು. ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿ ಜನರಿಗೆ ನಿರಂತರ ಮತ್ತು ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ಆಡಳಿತಕ್ಕೆ ಸೂಚಿಸಿದರು.
ಈ ವೇಳೆ ಜಿಪಂ ಸಿಬ್ಬಂದಿ ಸುವರ್ಣಾ ಮಹೇಂದ್ರಕರ, ಶೇಖರ ಪೂಜಾರಿ, ದುಂಡಪ್ಪಾ ಅಂಗಡಿ, ಅಧ್ಯಕ್ಷೆ ಕಲ್ಪನಾ ಡೊಂಕನವರ, ಉಪಾಧ್ಯಕ್ಷೆ ಭೀಮವ್ವಾ ಕರೆನ್ನವರ, ಪಿಡಿಒ ಜ್ಯೋತಿ ಉಪ್ಪಿನ, ಮುಖ್ಯ ಶಿಕ್ಷಕ ಆರ್.ಜೆ.ತಲ್ಲೂರ ಮತ್ತಿತರರು ಉಪಸ್ಥಿತರಿದ್ದರು.


