ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ನಲ್ಲಿ ಗಿಲ್ಲಿ ನಟ ಗೆದ್ದು ಸಂಭ್ರಮಿಸಿದ್ದಾರೆ. ಇತ್ತ .ಮೂರನೆಯ ಸ್ಥಾನಕ್ಕೆ ಅರ್ಥಾತ್ 2ನೇ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡ ಅಶ್ವಿನಿ ಗೌಡ ನೋವಿನಲ್ಲಿ ಮಾಧ್ಯಮವೊಂದಕ್ಕೆ ಮಾತನ್ನಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಮೊದಲಿನಿಂದಲೂ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ಹಾವು ಮುಂಗುಸಿ ರೀತಿಯೇ ಬಿಗ್ಬಾಸ್ ಮನೆಯಲ್ಲಿ ಇದ್ದವರು. ಇವೆಲ್ಲಾ ಆಟದಲ್ಲಿ ಸಹಜ ಕೂಡ. ಫಿನಾಲೆ ಸಮೀಪದಲ್ಲಿಯೇ ತಾವು ಏಕವಚನ ಬಳಕೆ ಮಾಡಿದ್ದಕ್ಕೆ ಅಶ್ವಿನಿ ಅವರಿಗೆ ಗಿಲ್ಲಿ ನಟ ಕ್ಷಮೆ ಕೋರಿದ್ದರೆ, ನಿನ್ನಿಂದ ಕಲಿಯೋದು ತುಂಬಾ ಇದೆ ಎಂದು ಅಶ್ವಿನಿ ಅವರು ಗಿಲ್ಲಿ ನಟನಿಗೆ ಬಹುಪರಾಕ್ ಹಾಡಿದ್ದರು.
ಇದೀಗ ರಿಯಾಲಿಟಿ ಶೋಗಳಲ್ಲಿ ಬಡವರ ಮಕ್ಕಳು ಬೆಳೆಯಬೇಕಾ ಅಥವಾ ಟ್ಯಾಲೆಂಟ್ ಇರೋರಾ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಬಡವರ ಮಕ್ಕಳಾಗಿ ಟ್ಯಾಲೆಂಟ್ ಇದ್ದವರು ಗೆಲ್ಲಬೇಕು ಎನ್ನುವವರು ಹಲವರು ಇದ್ದಾರೆ. ಆದರೆ ಬಡವರ ಮಕ್ಕಳ ಸೋಗಿನಲ್ಲಿಯೇ ಕೆಲವರು ಗೆಲುವು ಸಾಧಿಸುತ್ತಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.
ಗಿಲ್ಲಿ ನಟ ಬಡವನ ಸೋಗಿನಲ್ಲಿ ಬಿಗ್ಬಾಸ್ ವಿನ್ ಆಗಿದ್ದಾರೆ ಎಂದು ನೇರಾನೇರವಾಗಿಯೇ ಅಶ್ವಿನಿ ಗೌಡ ಅವರು ಆರೋಪಿಸಿದ್ದಾರೆ. ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಅಶ್ವಿನಿ ಗೌಡ ಅವರು, ಡಾಲಿ ಧನಂಜಯ್ ಹೇಳಿದಂತೆ ಬಡವರ ಮಕ್ಕಳು ಗೆಲ್ಲಬೇಕು ನಿಜ, ನಾನೂ ಅದನ್ನೇ ಹೇಳುವವಳು. ಆದರೆ ಗಿಲ್ಲಿ ನಿಜಕ್ಕೂ ಬಡವನಾ ಎಂದು ಪ್ರಶ್ನಿಸಿದ್ದಾರೆ.
ಬಡವರು ಬೇರೆ, ಬಡವರ ವೇಷದಲ್ಲಿ ನಟಿಸೋದು ಬೇರೆ. ಗಿಲ್ಲಿಯ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಅವರು ಚೆನ್ನಾಗಿಯೇ ಆಡಿದ್ದಾರೆ, ವಿನ್ ಕೂಡ ಆಗಿದ್ದಾರೆ. ಆದರೆ ಬಡವ ಎನ್ನುವ ಟ್ಯಾಗ್ಲೈನ್ ಹೊತ್ತು ವಿನ್ ಆಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಹಾಗಾಗಿ ಬಹುಶಃ ಅವರ ಆಟ ಎಲ್ಲರಿಗೂ ಇಷ್ಟವಾಗಿದೆ ಅಂತಾ ಹೇಳೋದಕ್ಕೆ ಇಷ್ಟ ಪಡ್ತೀನಿ. ಗಿಲ್ಲಿ ಬಡವ ಅಂತಾ ಹೇಳಿದ್ರೆ ತಪ್ಪಾಗುತ್ತದೆ. ಅದನ್ನು ನಾವು ಆಟದಲ್ಲಿ ಸ್ಟ್ಯಾಟರ್ಜಿ ಕಾರ್ಡ್ ಆಗಿ ಅದನ್ನು ಬಳಸಬಾರದು. ಇರಲಿ, ಗಿಲ್ಲಿ ಗೆದ್ದಿದ್ದಾರೆ. ಅವರ ಆಟದ ಬಗ್ಗೆ, ವ್ಯಕ್ತಿತ್ವದ ಬಗ್ಗೆ ನನಗೆ ಖಂಡಿತವಾಗಿಯೂ ಹೆಮ್ಮೆ ಇದೆ.
ಯಾಕೆಂದರೆ ಅವರೂ ಕೂಡ ನನ್ನ ಜೊತೆ ಪ್ರಯಾಣ ಮಾಡಿದ ಒಬ್ಬ ಪ್ರತಿಸ್ಪರ್ಧಿ. ನಾನು ಯಾವತ್ತೂ ಅವರನ್ನು ಬಿಟ್ಟುಕೊಡಲು ಇಷ್ಟಪಡಲ್ಲ. ಯಾಕೆಂದರೆ ಯುದ್ಧ ಮಾಡಬೇಕಾದರೆ, ಕತ್ತಿಯನ್ನು ಕೈಯಲ್ಲಿ ಇಟ್ಕೊಂಡು ಇರ್ತೀವಿ. ಈಗ ಬಿಗ್ ಬಾಸ್ ಮುಗಿದಿದೆ. ಕತ್ತಿಯನ್ನ ಕೆಳಗೆ ಇಟ್ಟಿರ್ತೀವಿ. ಮತ್ತೆ ಅದನ್ನು ಎತ್ತಿಕೊಳ್ಳಲು ನನಗೆ ಇಷ್ಟವಿಲ್ಲ. ಅವರ ಭವಿಷ್ಯ ಉಜ್ವಲವಾಗಿರಲಿ. ಅವರು ನನ್ನನ್ನು ಅತ್ತೆಯ ಮಗಳು ಎಂದು ಕರೆದಿದ್ದಾರೆ. ನಾನು ಅವರನ್ನು ಮಾವನ ಮಗ ಎಂದು ಕರೆದಿದ್ದೀನಿ. ಎಲ್ಲರಿಗೂ ಒಳ್ಳೆಯದಾಗಲಿ. ಆದರೆ ಆ ಟ್ಯಾಗ್ ಲೈನ್ ಇದೆಯಲ್ಲ. ಬಡವರ ಮಕ್ಕಳು ಗೆಲ್ಲಬೇಕು. ಹೌದು, ನಿಜವಾಗಿಯೂ ಬಡವರ ಮಕ್ಕಳು ಗೆಲ್ಲಬೇಕು. ಬಡವರ ಮಕ್ಕಳ ಹಾಗೆ ಗೆಟಪ್ ಹಾಕಿಕೊಂಡು ಗೆಲ್ಲಬಾರದು. ಅದು ನನಗೆ ಸರಿ ಅನಿಸುತ್ತಿಲ್ಲ ಎಂದಿದ್ದಾರೆ.


