ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕಳೆದ ಮೂರು–ನಾಲ್ಕು ದಿನಗಳಿಂದ ಮೈಕೊರೆಯುವ ಚಳಿಯಿಂದ ಕಂಪಿಸುತ್ತಿದೆ. ಇಂದು ಕೂಡಾ ಇಡೀ ದಿನ ಮೋಡಮುಸುಕಿದ ವಾತಾವರಣದ ಜೊತೆಗೆ ತೀವ್ರ ಚಳಿ ಕಂಡುಬಂದಿದ್ದು, ಸಿಟಿ ಜನರು ಮನೆಯಿಂದ ಹೊರಬರಲು ಹಿಂಜರಿಯುವಂತಾಗಿದೆ. ಅದರೊಂದಿಗೆ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣವಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉದ್ಯಾನನಗರಿ ಬೆಂಗಳೂರಿನಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಎಲ್ಲ ಸಮಯದಲ್ಲೂ ಚಳಿಯ ಪ್ರಭಾವ ಇದ್ದು, ಬೆಚ್ಚನೆಯ ಉಡುಪು, ಸ್ವೆಟರ್, ಜಾಕೆಟ್, ಕ್ಯಾಪ್ ಧರಿಸಿ ಜನರು ಪಾರ್ಕ್‌ಗಳಲ್ಲಿ ವಾಕಿಂಗ್ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ಲಾಲ್‌ಬಾಗ್ ಸೇರಿದಂತೆ ವಿವಿಧ ಉದ್ಯಾನಗಳಲ್ಲಿ ಯುವಕರು, ಗೃಹಿಣಿಯರು ಹಾಗೂ ವಯೋವೃದ್ಧರು ಚಳಿಯ ನಡುವೆಯೂ ವಾಕ್ ಮಾಡಿ ಎಂಜಾಯ್ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ನಿನ್ನೆ 14 ಡಿಗ್ರಿಗೆ ಇಳಿಕೆಯಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಮುಂದಿನ ನಾಲ್ಕು ದಿನಗಳ ಕಾಲ ಕನಿಷ್ಠ ತಾಪಮಾನ ಮುಂದುವರಿಯುವ ಸಾಧ್ಯತೆ ಇದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಡಿಪ್ರೆಶನ್‌ನಿಂದ ಶೀತಗಾಳಿ ಹೆಚ್ಚಾಗಿ ಚಳಿ ತೀವ್ರವಾಗಿದೆ. ತುಂತುರು ಮಳೆಯೂ ಕೆಲವೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳು ಹಾಗೂ ವಯೋವೃದ್ಧರು ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

