Saturday, October 18, 2025

ದೀಪಾವಳಿಗೆ ಕೌಂಟ್‌ಡೌನ್ ಶುರು | ನಿಷೇಧಿತ ಪಟಾಕಿ ಮಾರಿದ್ರೆ ಅಷ್ಟೆ ಕತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಕಿನ ಹಬ್ಬ ದೀಪಾವಳಿ ಇನ್ನೇನು ಕೇವಲ ಕೆಲವೇ ದಿನಗಳಲ್ಲಿ ಸಂಭ್ರಮಿಸಲು ಸಿದ್ಧವಾಗಿದೆ. ದೀಪಾವಳಿ ಎಂದಾಕ್ಷಣ ಪಟಾಕಿಗಳ ಶಬ್ದ, ಬಣ್ಣದ ಬೆಳಕು ನೆನಪಾಗುವುದು ಸಹಜ. ಆದರೆ ಪರಿಸರ ಮಾಲಿನ್ಯ ಹೆಚ್ಚಳವನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಈ ಬಾರಿ ಕೇವಲ “ಹಸಿರು ಪಟಾಕಿ”ಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ. ನಿಷೇಧಿತ ಪಟಾಕಿಗಳ ಮಾರಾಟ ಮತ್ತು ಬಳಕೆಯ ಮೇಲೆ ಅಧಿಕಾರಿಗಳು ಕಣ್ಗಾವಲು ಇರಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸುಮಾರು 72 ಪಟಾಕಿ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ತಂಡಗಳು ಈ ಮಳಿಗೆಗಳ ಮೇಲೆ ನಿಗಾ ವಹಿಸಿವೆ. ನಿಷೇಧಿತ ಪಟಾಕಿಗಳ ಮಾರಾಟ ಪತ್ತೆಯಾದಲ್ಲಿ ದಂಡ ಮತ್ತು ಕ್ರಿಮಿನಲ್ ಕೇಸ್ ದಾಖಲಿಸಲು ಸರ್ಕಾರ ಸಿದ್ಧತೆ ನಡೆಸಿದೆ.

ಪಟಾಕಿಗಳ ಶಬ್ದ ಪ್ರಮಾಣವನ್ನು ಪರೀಕ್ಷಿಸಲು ಅಧಿಕಾರಿಗಳು 10 ಮೀಟರ್ ದೂರದ ಶಬ್ದ ಮಾಪನ ಸಾಧನಗಳನ್ನು ಬಳಸುತ್ತಿದ್ದಾರೆ. 125 ಡೆಸಿಬಲ್ ಮೀರಿದ ಶಬ್ದ ಹೊರಬಂದರೆ, ಅದನ್ನು ನಿಷೇಧಿತ ಪಟಾಕಿ ಎಂದು ಪರಿಗಣಿಸಲಾಗುತ್ತದೆ. ಜೊತೆಗೆ, 1991ರ ಪಬ್ಲಿಕ್ ಲೈಬಿಲಿಟಿ ಆಕ್ಟ್ ಪ್ರಕಾರ ಪಟಾಕಿ ಅಂಗಡಿಗಳಿಗೆ ಇನ್‌ಶ್ಯೂರೆನ್ಸ್ ಕಡ್ಡಾಯಗೊಳಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

error: Content is protected !!