January19, 2026
Monday, January 19, 2026
spot_img

ದಸರಾ ಜಂಬೂಸವಾರಿಗೆ ಕೌಂಟ್ ಡೌನ್ ಶುರು: ಕಣ್ತುಂಬಿಕೊಳ್ಳೋಕೆ ನೀವು ರೆಡಿನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಜಂಬೂಸವಾರಿಗೆ ಈಗಾಗಲೇ ಎಲ್ಲ ಸಿದ್ಧತೆ ನಡೆದಿದ್ದು, ನಗರದಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿದೆ. ಅರಮನೆ ಆವರಣದಲ್ಲಿ ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇಂದು ನಡೆಯಲಿರುವ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಕಾತರದಿಂದ ಕಾಯುತ್ತಿದ್ದಾರೆ.

415ನೇ ದಸರಾ ಮಹೋತ್ಸವದ ಅಂಗವಾಗಿ ಬೆಳಗ್ಗೆ 9:30ಕ್ಕೆ ಪಟ್ಟದ ಆನೆ, ಕುದುರೆ ಮತ್ತು ಖಾಸಾ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. 9:45ಕ್ಕೆ ವಜ್ರಮುಷ್ಠಿ ಕಾಳಗ, 10:50ಕ್ಕೆ ಬನ್ನಿಪೂಜೆ ಹಾಗೂ ಭುವನೇಶ್ವರಿ ದೇವಾಲಯದಲ್ಲಿ ವಿಜಯಯಾತ್ರೆ ನೆರವೇರಲಿದೆ. ನಂತರ ಮಧ್ಯಾಹ್ನ 1 ಗಂಟೆಗೆ ಸಿಎಂ ಸಿದ್ದರಾಮಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. 3:40ರ ನಂತರ ಚಿನ್ನದ ಅಂಬಾರಿ ಕಟ್ಟಲಾಗುತ್ತಿದ್ದು, ಸಂಜೆ 4:42ರಿಂದ 5:06 ಗಂಟೆಗೆ ಪುಷ್ಪಾರ್ಚನೆ ನೆರವೇರಲಿದೆ. ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ನಡೆಯಲಿದ್ದು, ಸಂಜೆ 7 ಗಂಟೆಗೆ ಪಂಜಿನ ಕವಾಯತು ಕೂಡ ಜರುಗಲಿದೆ.

ಈ ಬಾರಿ ಜಂಬೂಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತು ಆರನೇ ಬಾರಿಗೆ ರಾಜಗಾಂಭೀರ್ಯದಲ್ಲಿ ಹೆಜ್ಜೆ ಹಾಕಲಿದ್ದಾನೆ. ಧನಂಜಯ, ಗೋಪಿ, ಭೀಮ, ಶ್ರೀಕಂಠ, ಲಕ್ಷ್ಮಿ ಸೇರಿದಂತೆ ಇತರ ಆನೆಗಳೂ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತವೆ. ಒಟ್ಟಾರೆ 10ಕ್ಕೂ ಹೆಚ್ಚು ಆನೆಗಳು ದಸರಾ ಗಜಪಡೆಯಾಗಿ ಅಂಬಾರಿ ಸಾಗುವ ಮಾರ್ಗದಲ್ಲಿ ಹೆಜ್ಜೆ ಹಾಕಲಿವೆ.

ಅಂಬಾವಿಲಾಸ ಅರಮನೆ ಆವರಣದಲ್ಲಿ ಈ ಬಾರಿ 48 ಸಾವಿರ ಜನರಿಗೆ ಮಾತ್ರ ಆಸನ ವ್ಯವಸ್ಥೆ ಮಾಡಲಾಗಿದೆ. ಕಳೆದ ವರ್ಷ 60 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ ಹಿನ್ನೆಲೆಯಲ್ಲಿ, ಕಾಲ್ತುಳಿತ ಅವಘಡ ತಡೆಯುವ ನಿಟ್ಟಿನಲ್ಲಿ ಸರ್ಕಾರ ವೀಕ್ಷಕರ ಸಂಖ್ಯೆ ಇಳಿಕೆ ಮಾಡಿದೆ. ಪಾಸ್ ಹೊಂದಿರುವವರಿಗೆ ಮಾತ್ರ ಪ್ರವೇಶ ಅವಕಾಶವಿದ್ದು, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ನಗರಾದ್ಯಂತ ಭದ್ರತೆ ಹೆಚ್ಚಿಸಲಾಗಿದ್ದು, 9 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಂಬಾರಿ ಸಾಗುವ ರಾಜಮಾರ್ಗದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಮಾರ್ಗದುದ್ದಕ್ಕೂ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಜನಸಂದಣಿ ನಿಯಂತ್ರಣಕ್ಕಾಗಿ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.

Must Read

error: Content is protected !!