Monday, October 27, 2025

ಅತ್ಯಾಧುನಿಕ ಸ್ವದೇಶೀ ಸಿಎಂಎಸ್‌-3 ಉಪಗ್ರಹದ ಉಡಾವಣೆಗೆ ದಿನಗಣನೆ ಶುರು: ಇಸ್ರೋ ಅಂಗಳ ಫುಲ್ ಬಿಝಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ- ಇಸ್ರೋ ನ.2 ರಂದು ಅತಿ ಭಾರದ ಉಡಾವಣಾ ವಾಹಕ ಎಲ್‌ವಿಎಂ- 3 ರಾಕೆಟ್ ಮೂಲಕ ಬೃಹತ್‌ ಗಾತ್ರದ ಸಿಎಂಎಸ್‌ -3 ಸಂವಹನ ಉಪಗ್ರಹದ ಉಡಾವಣೆ ನಡೆಸಲಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ 4 ಸಾವಿರದ 400 ಕೆ.ಜಿ ಭಾರದ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು. ಈ ಕುರಿತು ಇಸ್ರೋ ವಿಜ್ಞಾನಿಗಳ ತಂಡ ಅಂತಿಮ ಸಿದ್ಧತೆ ನಡೆಸಿದೆ.

ಸಿಎಂಎಸ್‌-3 ಇಸ್ರೋ ನಿರ್ಮಿಸಿರುವ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸಂವಹನ ಉಪಗ್ರಹವಾಗಿದ್ದು, ದೇಶದಲ್ಲಿ ಉಡಾವಣೆಗೊಳ್ಳುತ್ತಿರುವ ಅತಿ ಭಾರದ ಉಪಗ್ರಹವಾಗಿದೆ. ಇದರಿಂದ ದೇಶದ ಸಂಪರ್ಕ ಮೂಲ ಸೌಕರ್ಯ ವಿಸ್ತರಣೆ ಹಾಗೂ ದೂರದ ಪ್ರದೇಶಗಳಿಗೆ ಡಿಜಿಟಲ್‌ ಸೇವೆಯನ್ನು ಕಲ್ಪಿಸಲು ಅನುಕೂಲವಾಗಲಿದೆ. ಸಮುದ್ರ ಪ್ರದೇಶದಲ್ಲಿ ಕಾರ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಅತ್ಯಂತ ಭಾರವಾಗಿರುವ ಎಲ್‌ವಿಎಂ ರಾಕೆಟ್‌ನ ಐದನೇ ಕಾರ್ಯಾಚರಣೆ ಇದಾಗಿದ್ದು, 2023ರಲ್ಲಿ ಚಂದ್ರಯಾನ -3 ಯೋಜನೆಗೆ ಬಳಕೆಯಾಗಿತ್ತು.

error: Content is protected !!