ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ನಡೆದ ಇಂಡಿಗೋ ವಿಮಾನ ರದ್ದತಿ ಪ್ರಕರಣಗಳು ಭಾರತೀಯ ವಿಮಾನಯಾನ ವಲಯದ ಮೂಲಭೂತ ಸವಾಲುಗಳನ್ನು ಬಹಿರಂಗಪಡಿಸಿವೆ. ಇದೇ ಹಿನ್ನೆಲೆಯಲ್ಲೇ, ದೇಶದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಹಾಗೂ ಭವಿಷ್ಯದ ಬೇಡಿಕೆಯನ್ನು ಮನಗಂಡು ಭಾರತಕ್ಕೆ ಕೇವಲ ಎರಡು ಅಲ್ಲ, ಕನಿಷ್ಠ ಐದು ದೊಡ್ಡ ವಿಮಾನಯಾನ ಸಂಸ್ಥೆಗಳ ಅಗತ್ಯವಿದೆ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ರಾಜ್ಯಸಭೆಯಲ್ಲಿ ತಿಳಿಸಿದರು.
ಇಂಡಿಗೋ ಎದುರಿಸಿದ ಬಿಕ್ಕಟ್ಟಿನ ಕುರಿತು ಮಾತನಾಡಿದ ಸಚಿವರು, ವಿಮಾನ ರದ್ದತಿಗೆ ಹೊರಗಿನ ಕಾರಣಗಳಿಗಿಂತ ಸಂಸ್ಥೆಯೊಳಗಿನ ಆಡಳಿತಾತ್ಮಕ ಮತ್ತು ಸಿಬ್ಬಂದಿ ನಿರ್ವಹಣಾ ಸಮಸ್ಯೆಗಳೇ ಮುಖ್ಯ ಕಾರಣ ಎಂದು ಸ್ಪಷ್ಟಪಡಿಸಿದರು. ಪೈಲಟ್‌ಗಳು, ಕ್ಯಾಬಿನ್ ಸಿಬ್ಬಂದಿ ಹಾಗೂ ಪ್ರಯಾಣಿಕರ ಸುರಕ್ಷತೆಯಲ್ಲಿ ಸರ್ಕಾರ ಯಾವುದೇ ರೀತಿಯ ರಾಜಿಗೆ ಹೋಗುವುದಿಲ್ಲ ಎಂದು ಅವರು ಕಠಿಣವಾಗಿ ಹೇಳಿದರು.
ಎಫ್‌ಡಿಟಿಎಲ್ ನಿಯಮಗಳ ಪಾಲನೆ ಕುರಿತು ಸರ್ಕಾರ ಕಳೆದ ಒಂದು ತಿಂಗಳಿನಿಂದ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದು, ಡಿಸೆಂಬರ್ 1ರಂದು ಇಂಡಿಗೋ ಅಧಿಕಾರಿಗಳ ಜೊತೆ ವಿಶೇಷ ಸಭೆಯನ್ನೂ ನಡೆಸಲಾಗಿದೆ. ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿಲ್ಲ, ಸಂಪೂರ್ಣ ತನಿಖೆ ನಡೆಯುತ್ತಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಈ ಕ್ಷೇತ್ರಕ್ಕೆ ಬರಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವ ರಾಮಮೋಹನ್ ನಾಯ್ಡು ತಿಳಿಸಿದರು. ವಿಮಾನಯಾನ ವಲಯ ವಿಸ್ತರಣೆ ಜೊತೆಗೆ ಸುರಕ್ಷತೆ ಮತ್ತು ನಿಯಮ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಸ್ಪಷ್ಟವಾಗಿ ರವಾನಿಸಿದೆ.

