ಉತ್ತರ ಕರ್ನಾಟಕ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಅನುಕೂಲಕ್ಕಾಗಿ ಪ್ರತ್ಯೇಕ ರಾಜ್ಯ ಆಗಬೇಕೆಂದುಣ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯದ ಕೂಗಿಗೆ ಸುಮಾರು 26 ಜನ ಶಾಸಕರು ಪಕ್ಷಾತೀತವಾಗಿ ಬೆಂಬಲಿಸಿದ್ದಾರೆ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಹೇಳಿದರು.
ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉ.ಕ ಹೋರಾಟ ಸಮಿತಿ ಸದಸ್ಯರುಗಳು, ಈ ಭಾಗದ ಎಲ್ಲ ಶಾಸಕರು ಬೆಂಬಲಿಸಬೇಕು. ಕರ್ನಾಟಕ ಏಕೀಕರಣ ಆದಾಗಿನಿಂದ ಇಲ್ಲಿಯವರೆಗೂ ಎಲ್ಲ ಕ್ಷೇತ್ರಗಳಲ್ಲಿಯೂ ತಾರತಮ್ಯ, ಅನ್ಯಾಯ, ಮಲತಾಯಿ ಧೋರಣೆ ಮುಂದುವರೆದಿದೆ. ನಮ್ಮ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ. ಪ್ರತಿಯೊಂದಕ್ಕೂ ಹೋರಾಟ ಮಾಡಬೇಕಾಗಿರುವುದು ನಮ್ಮ ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನವೆಂಬರ್ ೧ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯಲ್ಲೂ ತಾರತಮ್ಯ ಅಗಿದೆ. ಮಾಧ್ಯಮ ಕ್ಷೇತ್ರದ 4 ಜನರಲ್ಲಿ ಒಬ್ಬ ಉತ್ತರ ಕರ್ನಾಟಕ ಭಾಗದವರಿಗೂ ಪ್ರಶಸ್ತಿ ಕೊಟ್ಟಿಲ್ಲ. ನಮ್ಮ ಭಾಗದ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯ ಅವಶ್ಯ ಮತ್ತು ಅನಿವಾರ್ಯವಾಗಿದೆ. ಈ ಭಾಗದ ಯುವಕರಿಗೆ ಉದ್ಯೋಗಾವಕಾಶಗಳು ಸಿಗಲು ಐಟಿ,ಬಿಟಿ, ಬಹುರಾಷ್ಟ್ರೀಯ ಕಂಪನಿಗಳು ಸ್ಥಾಪನೆಯಾಗಬೇಕು. ಈ ಭಾಗದ ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕು. ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಸಿಗಬೇಕು, ಎಲ್ಲ ವರ್ಗದ ಜನರು ಸ್ವಾಭಿಮಾನ, ಸ್ವಾತಂತ್ರ್ಯ, ಸ್ವಾವಲಂಬನೆ ಯೊಂದಿಗೆ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಪ್ರತ್ಯೇಕ ರಾಜ್ಯ ಅನಿವಾರ್ಯವಾಗಿದೆ.
ಶಾಸಕ ರಾಜು ಕಾಗೆ ಯವರ ಪ್ರಕಾರ ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದ ಭಾಗವನ್ನು ಒಟ್ಟುಗೂಡಿಸಿ 15 ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ, ಉತ್ತರಕನ್ನಡ, ಹಾವೇರಿ, ದಾವಣಗೆರೆಗಳ ಪ್ರತ್ಯೇಕ ರಾಜ್ಯ ರಚನೆ ಆಗಬೇಕು ಎಂದು ನಾಗೇಶ ಗೋಲಶೆಟ್ಟಿ, ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ರಾಷ್ಟ್ರಪತಿಗಳಿಗೆ, ಪ್ರಧಾನ ಮಂತ್ರಿಗಳಿಗೆ, ರಾಜ್ಯಪಾಲರಿಗೆ, ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ್ರತ್ಯೇಕ ರಾಜ್ಯಕ್ಕೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇತ್ತೀಚೆಗೆ ಪ್ರತ್ಯೇಕ ಮೈಸೂರು ರಾಜ್ಯ ರಚನೆಗೆ ಮರಿಮಲ್ಲಯ್ಯ ಅವರ ಅಧ್ಯಕ್ಷತೆಯಲ್ಲಿ ಆ ಭಾಗದ ಹೋರಾಟಗಾರರು ಆಗ್ರಹಿಸಿದ್ದು ಉತ್ತರ ಕರ್ನಾಟಕ ಹೋರಾಟ ಸಮಿತಿಯು ಸ್ವಾಗತಿಸಿದೆ. ಕಾಗೆಯವರ ಪತ್ರಕ್ಕೆ ಈಗಾಗಲೇ ಅನೇಕ ಶಾಸಕರು ಬೆಂಬಲವನ್ನು ವ್ಯಕ್ತಪಡಿಸಿದ್ದು ಎಲ್ಲಾ ಉತ್ತರ ಕರ್ನಾಟಕ ಭಾಗದ ಶಾಸಕರು ಬೆಂಬಲಿಸಬೇಕಾಗಿದೆ. ಈ ಹಿಂದೆ ಸಂಸದರಾದ ರಮೇಶ ಜಿಗಜಿಣಗಿ ಅವರು ಗೌರವಾನ್ವಿತ ರಾಜ್ಯಪಾಲರಿಗೆ ಪ್ರತ್ಯೇಕ ರಾಜ್ಯ ಆಗ್ರಹಿಸಿ ಪತ್ರವನ್ನು ಬರೆದಿದ್ದಾರೆ.
ಪಕ್ಷಾತೀತವಾಗಿ ಉತ್ತರ ಕರ್ನಾಟಕ ಭಾಗದ ಎಲ್ಲಾ ಜನಪ್ರತಿನಿಧಿಗಳು ಉ.ಕ ಪ್ರತ್ಯೇಕ ರಾಜ್ಯಕ್ಕೆ ಬೆಂಬಲಿಸಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ಚಿಕ್ಕ ರಾಜ್ಯ ಚೊಕ್ಕ ಆಡಳಿತ ಎಂಬ ಅಂಬೇಡ್ಕರ್ ಅವರ ಪರಿಕಲ್ಪನೆಯಂತೆ ಚಿಕ್ಕ ರಾಜ್ಯಗಳ ರಚನೆ ಆಡಳಿತ ಮತ್ತು ಅಭಿವೃದ್ಧಿಗೆ ಪೂರಕವಾಗುತ್ತದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಭಾರತದಲ್ಲಿ ಕೇವಲ 17 ರಾಜ್ಯಗಳಿದ್ದವು. ಈಗ ಸುಮಾರು 30 ರಾಜ್ಯಗಳನ್ನು ನಿರ್ಮಾಣ ಮಾಡಲಾಗಿದ್ದು ಅಭಿವೃದ್ಧಿಗೆ ಅನುಕೂಲಕರವಾಗಿದೆ. ಕೇಂದ್ರ ಸರಕಾರವು ಇನ್ನೂ ಕೆಲವು ರಾಜ್ಯಗಳನ್ನು ನಿರ್ಮಾಣ ಮಾಡುವ ಚಿಂತನೆ ನಡೆಸಿದ್ದು ಶೀಘ್ರದಲ್ಲಿಯೇ ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಉತ್ತರ ಕರ್ನಾಟಕವನ್ನು ಪ್ರತ್ಯೇಕಗೊಳಿಸಿ ಹೊಸ ನಾಡನ್ನು ನಿರ್ಮಾಣ ಮಾಡಬೇಕಾಗಿದೆ.
ಉತ್ತರ ಕರ್ನಾಟಕವು ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಈ ಭಾಗ ಸಾಹಿತ್ಯ, ಸಂಸ್ಕೃತಿ, ಕಲೆ, ಅಧ್ಯಾತ್ಮ, ರಾಜಕಾರಣ ಎಲ್ಲ ಕ್ಷೇತ್ರದಲ್ಲಿಯೂ ಕೂಡ ವಿಶಿಷ್ಟತೆಯನ್ನು ಹೊಂದಿದ ನಾಡಾಗಿದೆ. ಬಸವ ನಾಡು ಎಂದು ಕರೆಯಲ್ಪಡುವ ಭಾಗದಲ್ಲಿ ನೆಲಸಂಪನ್ಮೂಲ, ಜಲಸಂಪನ್ಮೂಲ, ಮಾನವ ಸಂಪನ್ಮೂಲ, ಖನಿಜ ಸಂಪನ್ಮೂಲ ಹಾಗೂ ಇನ್ನಿತರೆ ಎಲ್ಲ ನೈಸರ್ಗಿಕ ಸಂಪನ್ಮೂಲಗಳು ಲಭ್ಯವಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡಲ್ಲಿ ಸಮೃದ್ಧ ನಾಡನ್ನು ನಿರ್ಮಾಣ ಮಾಡಬಹುದಾಗಿದೆ. ಈ ಭಾಗದ ಸರ್ವಜನರ ಸಮಗ್ರ ಅಭಿವೃದ್ಧಿಗಾಗಿ, ಮತ್ತೊಂದು ಸಮೃದ್ಧ ಕನ್ನಡ ನಾಡನ್ನು ನಿರ್ಮಾಣ ಮಾಡುವುದಕ್ಕಾಗಿ ನಾವೆಲ್ಲ ಹೋರಾಟ ಮಾಡಬೇಕಾಗಿದೆ.
ಹೊರಟ್ಟಿ ಅವರ ಹೇಳಿಕೆ ಬೇಸರ ತಂದಿದೆ; ಉತ್ತರ ಕರ್ನಾಟಕ ಭಾಗದ ಜವಾರಿ ಭಾಷೆಯ ಹಿರಿಯ ರಾಜಕಾರಣಿ, ಉತ್ತರ ಕರ್ನಾಟಕ ಸಮಾನ ಮನಸ್ಕ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಸಭಾಪತಿ ಹೊರತ್ತಿಯವರು ಮೇಲ್ಮನೆಯಲ್ಲಿ ಪ್ರತ್ಯೇಕ ರಾಜ್ಯ ವಿಷಯ ಕುರಿತು ಚರ್ಚೆಗೆ ನಾನು ಅವಕಾಶ ಕೊಡುವುದಿಲ್ಲ ಎಂದಿದ್ದು ಈ ಭಾಗದ ಜನರಿಗೆ ಬೇಸರ ತಂದಿದೆ. ಆಗಾಗ ಉತ್ತರ ಕರ್ನಾಟಕ ಕುರಿತು ಧ್ವನಿ ಎತ್ತುವ ನೀವು ಒಳ್ಳೆ ಹುದ್ದೆ ಸಿಕ್ಕಾಗ ಸುಮ್ಮನಾಗುವುದು ತಮಗೆ ಶೋಭೆಯಲ್ಲ. ಇದ್ದು ತಮ್ಮ ಬದ್ಧತೆ & ಸ್ವಾಭಿಮಾನಕ್ಕೆ ಧಕ್ಕೆ ಯಾಗುತ್ತದೆ. ಚರ್ಚೆಗೆ ಮುಕ್ತ ಅವಕಾಶ ಕೊಡಲು ನಮ್ಮ ವಿನಂತಿ ಇದೆ. 2018 ರಿಂದ ಉತ್ತರ ಕರ್ನಾಟಕ ಹೋರಾಟ ಸಮಿತಿಯು ಪ್ರತ್ಯೇಕ ರಾಜ್ಯಕ್ಕಾಗಿ ಲಿಖಿತ ಅಭಿಪ್ರಾಯ ಮತ್ತು ಸಹಿ ಸಂಗ್ರಹಣ ಅಭಿಯಾನವನ್ನು ಪ್ರಾರಂಭಿಸಿದ್ದು 15 ಜಿಲ್ಲೆಗಳಿಂದ ಒಂದು ಕೋಟಿ ನಲವತ್ತು ಲಕ್ಷಕ್ಕೂ ಅಧಿಕ ಜನರ ಸಹಿ ಸಂಗ್ರಹ ಮಾಡಿದೆ. 2025 ನವೆಂಬರ್ ಒಂದರಿಂದ ಜನಪ್ರತಿನಿಧಿಗಳಿಂದ ಸಹಿ ಸಂಗ್ರಹ ಹಾಗೂ ಪತ್ರ ಚಳುವಳಿಯ ಅಭಿಯಾನವನ್ನು ಪ್ರಾರಂಭಿಸಿದ್ದು ಈಗಾಗಲೇ ಈ ಭಾಗದ ಅನೇಕ ಜನಪ್ರತಿನಿಧಿಗಳು ಇದನ್ನು ಬೆಂಬಲಿಸಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಪತ್ರವನ್ನು ಕೂಡ ಬರೆದಿದ್ದಾರೆ.
ಇತ್ತೀಚೆಗೆ ಪ್ರತ್ಯೇಕ ಮೈಸೂರು ರಾಜ್ಯ ರಚನಾ ಸಮಿತಿ ಒತ್ತಾಯಿಸುತ್ತಿರುವ ಮೈಸೂರು ರಾಜ್ಯ ರಚನೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಸಹಮತವಿದೆ. ಡಿಸೆಂಬರ್ 8 ರಿಂದ 19 ರ ವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ರೈತರ ಬೆಳೆಗಳಿಗೆ ಬೆಂಬಲ ಬೆಲೆ, ಕಬ್ಬು ಬೆಳೆಗಾರರ ಸಮಸ್ಯೆ, ಯುವಕರ ನೌಕರಿ ನೇಮಕಾತಿ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಮರ್ಪಕ ಚರ್ಚೆಗಳಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅಧಿವೇಶನದಲ್ಲಿ ಅನಾವಶ್ಯಕ, ಅರ್ಥಹೀನ ವಿಷಯಗಳನ್ನು ಚರ್ಚೆ ಮಾಡಲು ಅವಕಾಶ ಕೊಡದೆ ಅಧಿವೇಶನ ಸಾರ್ಥಕವಾಗಬೇಕೆಂದು ಆಗ್ರಹಿಸಲಾಗಿದೆ.
ಈ ವೇಳೆ ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ, ಉತ್ತರ ಕರ್ನಾಟಕ ಹೋರಾಟ ಸಮಿತಿಯ ನಾಗೇಶ ಗೋಲಶೆಟ್ಟಿ, ಮಲ್ಲಿಕಾರ್ಜುನ ಜಗಜಂಪಿ. ವಿಲಿನಕುಮಾರ ತಾರಿಹಾಳ, ಪ್ರಕಾಶ ದೇಸಾಯಿ, ಅಡವೇಶ ಇಟಗಿ, ವೈ.ಜಿ. ಪಾಟೀಲ್ ಬಾಗಲಕೋಟೆ ಜಿಲ್ಲೆ ಅಧ್ಯಕ್ಷರು.- ಅಶೋಕ ದೇಶಪಾಂಡೆ, ಮಹಾಂತೇಶ ಶೇಲ್ಲಿಕೇರಿ, ಸೇರಿದಂತೆ ಮತ್ತಿತರರು ಇದ್ದರು.

