Tuesday, October 21, 2025

ಕುಟುಂಬ ಕಲಹದ ಕರಾಳ ಅಂತ್ಯ: ಮಗನ ಸಾವಿಗೆ ಪ್ರತೀಕಾರ, ಸೋದರಳಿಯನ ಮೇಲೆ ಕತ್ತಿ ಬೀಸಿದ ಚಿಕ್ಕಪ್ಪ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಸೋನಭದ್ರಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಕುಟುಂಬದೊಳಗಿನ ದ್ವೇಷದಿಂದ ಚಿಕ್ಕಪ್ಪನೇ ತನ್ನ ಅಣ್ಣನ ಮಗನ ಮೇಲೆ ಕತ್ತಿ ಬೀಸಿ ಹತ್ಯೆ ನಡೆಸಿದ ಘಟನೆ ನಡೆದಿದೆ.

19 ವರ್ಷದ ಜೀತ್ ಸಿಂಗ್ ಎಂಬ ಯುವಕ ತನ್ನ ಮನೆಯ ಬಾಗಿಲಲ್ಲಿ ಕುಳಿತಿದ್ದಾಗ, ಆತನ ಚಿಕ್ಕಪ್ಪ ಛತ್ತು ಸಿಂಗ್ ಅಕಸ್ಮಾತ್ ಕತ್ತಿ ಹಿಡಿದು ದಾಳಿ ನಡೆಸಿದ್ದಾನೆ. ಕ್ಷಣಾರ್ಧದಲ್ಲೇ ಜೀತ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ವರದಿಯ ಪ್ರಕಾರ, ಆರು ತಿಂಗಳ ಹಿಂದೆ ಆರೋಪಿ ಛತ್ತು ಸಿಂಗ್ ಅವರ ಮಗ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಆ ವೇಳೆ ಬೈಕ್ ಚಲಾಯಿಸುತ್ತಿದ್ದವನು ಜೀತ್ ಸಿಂಗ್ ಆಗಿದ್ದ. ಈ ಘಟನೆಯ ಬಳಿಕ ಚಿಕ್ಕಪ್ಪ ತನ್ನ ಮಗನ ಸಾವಿಗೆ ಅಣ್ಣನ ಮಗನನ್ನೇ ಕಾರಣವೆಂದು ಭಾವಿಸಿ ಸೇಡು ತೀರಿಸಿಕೊಳ್ಳಲು ಅವಕಾಶ ಹುಡುಕುತ್ತಿದ್ದನೆಂದು ತಿಳಿದುಬಂದಿದೆ.

ಇದರೊಂದಿಗೆ, ಆಸ್ತಿಯ ಹಕ್ಕಿನ ವಿಚಾರದಲ್ಲೂ ಈ ಇಬ್ಬರ ಕುಟುಂಬಗಳ ನಡುವೆ ದೀರ್ಘಕಾಲದ ವಿವಾದವಿತ್ತು. ಇದರಿಂದಾಗಿ ಛತ್ತು ಸಿಂಗ್ ಅಸಮಾಧಾನಗೊಂಡಿದ್ದನು. ಹೀಗಾಗಿ, ಕೋಪದ ಉನ್ಮಾದದಲ್ಲಿ ಈ ಹತ್ಯೆ ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಘಟನೆಯ ನಂತರ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಕೊಲೆಯ ನಂತರ ನಾಗವಾನ್ ಗ್ರಾಮದಲ್ಲಿ ತೀವ್ರ ಉದ್ವಿಗ್ನತೆ ವಾತಾವರಣ ನಿರ್ಮಾಣವಾಗಿದೆ.

error: Content is protected !!