ಹೊಸದಿಗಂತ ಚಿತ್ರದುರ್ಗ:
ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕದ ಭೀಕರತೆಯ ನಡುವೆ ನಡೆದಿದೆ ಎನ್ನಲಾದ ಆರೋಗ್ಯ ಇಲಾಖೆಯ ಖರೀದಿ ಅಕ್ರಮಗಳ ವಿರುದ್ಧ ಈಗ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಕೋವಿಡ್ ಅವಧಿಯ ಸಾಮಗ್ರಿ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ, ನ್ಯಾ. ಮೈಕಲ್ ಕುನ್ಹಾ ಆಯೋಗದ ವರದಿಯನ್ನು ಆಧರಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ಗಂಭೀರ ಚರ್ಚೆಗೆ ಗ್ರಾಸವಾಯಿತು.
ಸಭೆಯಲ್ಲಿ ಮಾತನಾಡಿದ ಸಚಿವ ಸುಧಾಕರ್, “ಚಿತ್ರದುರ್ಗ ಜಿಲ್ಲೆಯಲ್ಲಿ ಎಸ್‌ಡಿಆರ್‌ಎಫ್, ಡಿಎಂಎಫ್ ಮತ್ತು ಸಿಎಸ್‌ಆರ್ ನಿಧಿಯಡಿ ಕೋವಿಡ್ ನಿರ್ವಹಣೆಗಾಗಿ ಕೋಟ್ಯಂತರ ರೂಪಾಯಿ ಬಿಡುಗಡೆಯಾಗಿತ್ತು. ಆದರೆ, ಸುಮಾರು 38.46 ಕೋಟಿ ರೂಪಾಯಿ ಮೊತ್ತದ ಪಿಪಿಇ ಕಿಟ್, ಔಷಧಿ ಹಾಗೂ ವೈದ್ಯಕೀಯ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಸಮರ್ಪಕ ದಾಖಲೆಗಳಿಲ್ಲ ಎಂದು ಕುನ್ಹಾ ಆಯೋಗವು ವರದಿ ನೀಡಿದೆ. ಪ್ಯಾರಾಸೆಟಮಾಲ್‌ನಿಂದ ಹಿಡಿದು ಆಂಟಿಜನ್ ಟೆಸ್ಟ್ ಕಿಟ್‌ಗಳವರೆಗೆ ಪ್ರತಿಯೊಂದರಲ್ಲೂ ಲೋಪದೋಷಗಳು ಎದ್ದುಕಾಣುತ್ತಿವೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾಹಿತಿ ನೀಡಿ, ಸಿಎಸ್‌ಆರ್ ನಿಧಿಯಡಿ ನಡೆದಿರುವ ಖರೀದಿ ಪ್ರಕ್ರಿಯೆಯನ್ನು ಮರುಪರಿಶೀಲಿಸಲು ಐಎಎಸ್ ಅಧಿಕಾರಿ ವಿನೋತ್ ಪ್ರಿಯಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಮ್ಲನ್ ಆದಿತ್ಯ ಬಿಸ್ವಾಸ್, “ಅಧಿಕೃತ ಫಾರ್ಮಸಿಸ್ಟ್‌ಗಳಿಂದ ಮಾರುಕಟ್ಟೆ ದರವನ್ನು ಪಡೆದು ತುಲನೆ ಮಾಡಿ, ಅಕ್ರಮ ಸಾಬೀತಾದಲ್ಲಿ ತಕ್ಷಣವೇ ತಪ್ಪಿತಸ್ಥರ ಮೇಲೆ ಚಾರ್ಜ್‌ಶೀಟ್ ದಾಖಲಿಸಿ,” ಎಂದು ಸೂಚಿಸಿದರು.
ಹೊಳಲ್ಕೆರೆ ಶಾಸಕ ಡಾ. ಎಂ. ಚಂದ್ರಪ್ಪ ಮಾತನಾಡಿ, “ಜನರು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದಾಗ ಇಂತಹ ಹಗರಣ ನಡೆಸಿರುವುದು ಅಕ್ಷಮ್ಯ ಅಪರಾಧ,” ಎಂದರೆ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು “ಈ ಪ್ರಕರಣ ಕೇವಲ ವರದಿ ಸಲ್ಲಿಕೆಗೆ ಸೀಮಿತವಾಗದೆ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು,” ಎಂದು ಒತ್ತಾಯಿಸಿದರು.
ಸಭೆಯಲ್ಲಿ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಡಿ.ಟಿ. ಶ್ರೀನಿವಾಸ್, ಕೆ.ಎಸ್. ನವೀನ್ ಸೇರಿದಂತೆ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.


