ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೋಷಕರ ವಿರೋಧದ ನಡುವೆಯೂ ಪ್ರೀತಿಸಿದವರ ಜೊತೆ ಓಡಿ ಹೋಗುವ ಘಟನೆಗಳು ಸಾಮಾನ್ಯ. ಆದರೆ ಬೆಳಗಾವಿ ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ನಡೆದ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಇಲ್ಲಿ ಪ್ರೀತಿಸಿದ ಯುವಕನೊಂದಿಗೆ ಓಡಿಹೋದ ಮಗಳು ತಮ್ಮ ಪಾಲಿಗೆ ಸತ್ತು ಹೋದಳೆಂದು ತಂದೆಯೊಬ್ಬರು ಇಡೀ ಊರಿಗೆ ತಿಥಿ ಊಟ ಏರ್ಪಡಿಸಿದ್ದಾರೆ.
ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಪಾಟೀಲ್ ಅವರ ಮಗಳು ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬ ಯುವಕನೊಂದಿಗೆ ಪ್ರೀತಿಸುತ್ತಿದ್ದಳು. ಆದರೆ, ಪೋಷಕರು ಈ ಸಂಬಂಧಕ್ಕೆ ಒಪ್ಪದ ಕಾರಣ ಇಬ್ಬರೂ ಪರಾರಿಯಾಗಿದ್ದರು. ಮಗಳು ಕಾಣೆಯಾಗಿರುವ ಬಗ್ಗೆ ಮೊದಲು ಶಿವಗೌಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ನಂತರ ಮಗಳು ಪ್ರೀತಿಸಿದ ಯುವಕನೊಂದಿಗೆ ಓಡಿಹೋಗಿರುವುದು ಸ್ಪಷ್ಟವಾದ ಬಳಿಕ, ಅವರು ಆಘಾತಗೊಂಡು ಮಗಳು ಸತ್ತು ಹೋದಂತೆ ಶ್ರಾದ್ಧ ನೆರವೇರಿಸಲು ತೀರ್ಮಾನಿಸಿದರು.
ಮಗಳು ತಮ್ಮ ಕುಟುಂಬದ ಸಂಸ್ಕಾರವನ್ನು ಮೀರಿದ್ದಾರೆ ಎಂಬ ಕಾರಣಕ್ಕೆ ಕೋಪಗೊಂಡ ತಂದೆ ನಾಗರಾಳ ಗ್ರಾಮದಲ್ಲಿ ತಿಥಿ ಆಚರಿಸಿ ಬಂಧು-ಬಳಗ, ಸಂಬಂಧಿಕರನ್ನು ಆಹ್ವಾನಿಸಿ ಭೋಜನ ಏರ್ಪಡಿಸಿದರು. ಅಲ್ಲದೆ, ಮಗಳ ಫೋಟೋ ಅಳವಡಿಸಿದ ಶ್ರದ್ಧಾಂಜಲಿ ಬ್ಯಾನರ್‌ಗಳನ್ನು ಊರಿನಾದ್ಯಂತ ಹಾಕಿಸಿ ಕರುಳ ಬಳ್ಳಿ ಸಂಬಂಧವನ್ನು ಕತ್ತರಿಸಿರುವುದಾಗಿ ಘೋಷಿಸಿದ್ದಾರೆ.