Wednesday, December 10, 2025

ಭಾರತ-ರಷ್ಯಾ ಬಾಂಧವ್ಯಕ್ಕೆ ಸಂಸ್ಕೃತಿಯ ಸ್ಪರ್ಶ ನೀಡಿದ ರಾಷ್ಟ್ರಪತಿ ಭವನದ ಭೋಜನಕೂಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಎರಡು ದಿನಗಳ ಭಾರತ ಭೇಟಿ ಅಂತ್ಯಗೊಂಡಿದೆ. ಅಧಿಕೃತ ಮಾತುಕತೆಗಳ ಜತೆಗೆ, ಈ ಭೇಟಿಯ ಸ್ಮರಣೀಯ ಕ್ಷಣವಾಗಿ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾದ ಗೌರವಾರ್ಥ ಭೋಜನಕೂಟ ಇದೀಗ ಎಲ್ಲರ ಗಮನ ಸೆಳೆದಿದೆ. ಭೇಟಿ ಮುಕ್ತಾಯದ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಆತಿಥ್ಯದಲ್ಲಿ ನಡೆದ ಈ ಸಮಾರಂಭ, ರಾಜತಾಂತ್ರಿಕ ಶಿಷ್ಟಾಚಾರಕ್ಕೆ ಸಾಂಸ್ಕೃತಿಕ ಸ್ಪರ್ಶ ನೀಡಿದಂತಾಯಿತು.

ಪುಟಿನ್‌ ಅವರಿಗೆ ನೀಡಲಾದ ಸಂಪೂರ್ಣ ಸಸ್ಯಾಹಾರಿ ಭೋಜನವು ಭಾರತದ ವೈವಿಧ್ಯಮಯ ಅಡುಗೆ ಪರಂಪರೆಯನ್ನು ಪ್ರತಿಬಿಂಬಿಸಿತು. ದಕ್ಷಿಣ ಭಾರತದ ರಸಂನಿಂದ ಆರಂಭವಾದ ಊಟ, ಕಾಶ್ಮೀರದಿಂದ ಹಿಮಾಲಯದ ತನಕ ವಿಸ್ತರಿಸಿದ ಪ್ರಾದೇಶಿಕ ಖಾದ್ಯಗಳನ್ನು ಉಣಬಡಿಸಲಾಗಿತ್ತು. ಪನೀರ್‌, ಆಲೂ, ಬದನೆ, ದಾಲ್‌, ಕೇಸರಿ ಪುಲಾವ್‌ ಸೇರಿದಂತೆ ಪರಂಪರೆಯ ರುಚಿಗಳು ಪುಟಿನ್‌ ಅವರಿಗೆ ವಿಶೇಷ ಮೆಚ್ಚುಗೆ ತಂದಿವೆ ಎನ್ನಲಾಗಿದೆ. ಸಿಹಿತಿನಿಸುಗಳಲ್ಲಿ ಬಾದಾಮ್‌ ಹಲ್ವಾ, ಕುಲ್ಫಿ ಹಾಗೂ ಭಾರತೀಯ ಸಾಂಪ್ರದಾಯಿಕ ಮಿಠಾಯಿಗಳು ಮೆನುವಿನ ಭಾಗವಾಗಿದ್ದವು.

ಭೋಜನಕೂಟದ ಜೊತೆಗೆ ನಡೆದ ಸಂಗೀತ ಕಾರ್ಯಕ್ರಮದಲ್ಲೂ ಭಾರತೀಯ ಮತ್ತು ರಷ್ಯಾದ ಸಂಗೀತ ಶೈಲಿಗಳ ಸಂಯೋಜನೆ ಕಾಣಿಸಿತು. ಭಾರತೀಯ ರಾಗಗಳು ಹಾಗೂ ರಷ್ಯಾದ ಪ್ರಸಿದ್ಧ ಸಂಗೀತ ಸ್ವರಗಳು ಒಟ್ಟಾಗಿ ಮೊಳಗಿದವು. ಈ ಆತಿಥ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಪುಟಿನ್‌, ನಂತರ ಮಾಸ್ಕೋದತ್ತ ಪ್ರಯಾಣ ಬೆಳೆಸಿದರು. ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ಸಚಿವ ಡಾ. ಎಸ್‌. ಜೈಶಂಕರ್ ಅವರು ರಷ್ಯಾ ಅಧ್ಯಕ್ಷರನ್ನು ಬೀಳ್ಕೊಟ್ಟರು. ಭಾರತ–ರಷ್ಯಾ ಸಂಬಂಧಗಳಿಗೆ ಈ ಭೇಟಿ ರಾಜಕೀಯದ ಜೊತೆಗೆ ಸಾಂಸ್ಕೃತಿಕ ಗಾಢತೆಯನ್ನೂ ನೀಡಿದೆ.

error: Content is protected !!