February 5, 2026
Thursday, February 5, 2026
spot_img

ಲಂಚ ಕೊಡೋಕೆ ದುಡ್ಡಿಲ್ಲ, ಆದರೆ ನಾನೇ ಬೆಳೆದ ಮೂಲಂಗಿ ಕೊಡ್ತೀನಿ ಎಂದು ಅನೌನ್ಸ್‌ ಮಾಡಿದ ರೈತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನ್ನ ಜಮೀನಿಗೆ ರಸ್ತೆ ಮಾಡಿಕೊಡಬೇಕು ಎಂದು ಲೋಕಾಯುಕ್ತರೇ ಸೂಚನೆ ನೀಡಿದ್ದಾರೆ. ಆದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಆದರೆ ನನ್ನ ಬಳಿ ಹಣ ಇಲ್ಲ ಎಂದು ತುಮಕೂರಿನ ರೈತರೊಬ್ಬರು ಹೇಳಿದ್ದಾರೆ.

ಮಧುಗಿರಿ ತಾಲೂಕಿನ ದೊಡ್ಡರಿ ಜಕ್ಕೇನಹಳ್ಳಿಯ ಗ್ರಾಮದ ರೈತ ಪ್ರಸನ್ನಕುಮಾರ್‌ ಲಂಚದ ಬೇಡಿಕೆಗೆ ಬೇಸತ್ತಿದ್ದು, ಮೂಲಂಗಿಯನ್ನೇ ಲಂಚವಾಗಿ ತೆಗೆದುಕೊಳ್ಳಿ ಎಂದು ಮೈಕ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

ಪ್ರಸನ್ನಕುಮಾರ್ ತನಗಿರುವ ಜಮೀನಿನಲ್ಲೇ ತರಕಾರಿ, ಇತರೆ ವ್ಯವಸಾಯೋತ್ಪನ್ನ ಬೆಳೆ ಬೆಳೆದು ಜೀವನ ನಡೆಸುತ್ತಿದ್ದಾರೆ. ಆದರೆ ಜಮೀನಿಗೆ ರಸ್ತೆ ಇಲ್ಲದ ಕಾರಣ ರಸ್ತೆಗಾಗಿ 2 ವರ್ಷದ ಹಿಂದೆ ತಾಲೂಕು ಆಡಳಿತಕ್ಕೆ ಮನವಿ ನೀಡಿದ್ದಾರೆ.

ಅವರ ಮನವಿಗೆ ಕಿವಿಗೊಡದ ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ರೈತನಿಗೆ ಒಂದು ತಿಂಗಳಲ್ಲಿ ರಸ್ತೆ ನಿರ್ಮಿಸಿಕೊಡಲು ಲೋಕಾಯುಕ್ತ ಸೂಚಿಸಿತ್ತು.

ಎರಡು ತಿಂಗಳಾದರೂ ರಸ್ತೆ ನಿರ್ಮಾಣಕ್ಕಾಗಿ ಸ್ಥಳ ಮಹಜರು ಹಾಗೂ ಪರಿಶೀಲನೆಗೆ ಬರಲು ಕೆಲವು ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದು, ಹಣವಿಲ್ಲದ ರೈತ ಪ್ರಸನ್ನಕುಮಾರ್ ಅಧಿಕಾರಿಗಳ ಈ ನಡೆಗೆ ಬೇಸರ ವ್ಯಕ್ತಪಡಿಸಿ ತಹಶೀಲ್ದಾರ್ ಬಳಿ ಮನವಿ ಮಾಡಿದ್ದರು. ಅವರು ರಸ್ತೆ ಮಾಡಿಕೊಡಲು ಸೂಚಿಸಿದ್ದರು. ಆದರೆ ಇಲ್ಲಿಯವರೆಗೂ ಕಂದಾಯ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಿಗರಾಗಲಿ ಬಂದಿಲ್ಲ. ಇದರಿಂದ ಬೆಸತ್ತ ರೈತ ಪ್ರಸನ್ನಕುಮಾರ್ ತಾನು ಬೆಳೆದ ಮೂಲಂಗಿಯನ್ನೇ ಲಂಚವಾಗಿ ಕೊಡಲು ಮುಂದಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !