Monday, November 24, 2025

ರಣರಂಗವಾಯ್ತು ಫುಟ್‌ಬಾಲ್ ಮೈದಾನ: ಎರಡು ತಂಡಗಳ ನಡುವೆ ಮಾರಾಮಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗು ಜಿಲ್ಲೆಯ ವಿರಾಜಪೇಟೆಯ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ‘ಮೆಮೋರಿಯಲ್ ಫುಟ್‌ಬಾಲ್ ಕಪ್’ ಪಂದ್ಯಾವಳಿ ಕ್ಷಣಾರ್ಧದಲ್ಲೇ ರಣರಂಗವಾಗಿ ಬದಲಾಗಿದ್ದು, ಕ್ರೀಡಾಮನೋಭಾವ ಮೆರೆಯಬೇಕಿದ್ದ ಮೈದಾನದಲ್ಲಿ ಗಲಾಟೆ ಸೃಷ್ಟಿಯಾಗಿದೆ.

ಕಡಂಗ ಮತ್ತು ಸುಂಟಿಕೊಪ್ಪ ತಂಡಗಳ ನಡುವೆ ನಡೆದ ರೋಚಕ ಪಂದ್ಯದಲ್ಲಿ ಸುಂಟಿಕೊಪ್ಪ ತಂಡ ಜಯಗಳಿಸಿದ ಬಳಿಕ ಗೆಲುವಿನ ಸಂಭ್ರಮದಲ್ಲಿದ್ದ ಆಟಗಾರರು ಹಾಗೂ ಬೆಂಬಲಿಗರ ಕಡೆ ಕಡಂಗ ತಂಡದ ಕೆಲ ಯುವಕರು ಡ್ರಮ್ ಎಸೆದಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿ. ಈ ಘಟನೆ ಮಾತಿನ ಚಕಮಕಿಗೆ ಕಾರಣವಾಗಿದ್ದು, ನಂತರ ಎರಡೂ ಕಡೆ ಆಟಗಾರರು ಹಾಗೂ ಅಭಿಮಾನಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ.

ಸ್ಥಿತಿಗತಿ ತೀವ್ರಗೊಳ್ಳುತ್ತಿದ್ದಂತೆಯೇ ವಿರಾಜಪೇಟೆ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದು, ಗಲಾಟೆ ನಿಂತ ಬಳಿಕ ಮೈದಾನದಲ್ಲಿ ಶಾಂತಿ ಕಾಪಾಡುವ ಕ್ರಮಗಳನ್ನು ಕೈಗೊಂಡರು. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ ನಂತರ ಸ್ಥಗಿತಗೊಂಡಿದ್ದ ಪಂದ್ಯಾವಳಿಯನ್ನು ಮುಂದುವರಿಸಲು ಅವಕಾಶ ಕಲ್ಪಿಸಿದರು.

error: Content is protected !!