ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯಲ್ಲಿ ಒಟ್ಟು 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ದೊರೆತಿದೆ.
ಕಾಗಿನೆಲೆಯಲ್ಲಿ ಪ್ರತಿ ವರ್ಷ ಕನಕ ಉತ್ಸವ ಆಚರಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಉತ್ಸವ ಸಂದರ್ಭದಲ್ಲಿ ಜಿಲ್ಲೆಯ ದಾರ್ಶನಿಕರ ಜೀವನಾದರ್ಶಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠದ ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ. ಜೊತೆಗೆ ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕನಕದಾಸರ ಕರ್ಮಭೂಮಿ ಕಾಗಿನೆಲೆ ಮತ್ತು ಜನ್ಮಭೂಮಿ ಸ್ಥಳವಾದ ಬಾಡ ಗ್ರಾಮ ಹಾಗೂ ಸುತ್ತಮುತ್ತಲಿನ ಪರಂಪರೆಯ ತಾಣಗಳನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸುವ ಬಗ್ಗೆ ಹಾಗೂ ವಿವಿಧ ಯೋಜನೆಗಳ ಕ್ರಿಯಾ ಯೋಜನೆಗೂ ಅನುಮೋದನೆ ನೀಡಲಾಗಿದೆ. ಕಾಗಿನೆಲೆ ಗ್ರಾಮದ ವ್ಯಾಪ್ತಿಯಲ್ಲಿ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಕಾಗಿನೆಲೆಗೆ ಅಭಿವೃದ್ಧಿ ಭಾಗ್ಯ ನೀಡಿದ ಸರ್ಕಾರ: 34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮುಖ್ಯಮಂತ್ರಿ ಗ್ರೀನ್ ಸಿಗ್ನಲ್

