ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಗಡಿಭಾಗವಾದ ಚೋರ್ಲಾ ಘಾಟ್‌ನಲ್ಲಿ ಸಿನಿಮೀಯ ಶೈಲಿಯ ದರೋಡೆಯೊಂದು ನಡೆದಿದ್ದು, ಸುಮಾರು 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನು ಹೈಜಾಕ್ ಮಾಡಲಾಗಿದೆ. 2025ರ ಅಕ್ಟೋಬರ್ 16ರಂದೇ ಈ ಘಟನೆ ನಡೆದಿದ್ದರೂ, ಪ್ರಕರಣವು ತಡವಾಗಿ ಬೆಳಕಿಗೆ ಬಂದಿರುವುದು ತನಿಖಾ ಸಂಸ್ಥೆಗಳನ್ನು ದಂಗಾಗಿಸಿದೆ.
ಗೋವಾದಿಂದ ಮಹಾರಾಷ್ಟ್ರದತ್ತ ಸಾಗುತ್ತಿದ್ದ ಈ ಕಂಟೇನರ್‌ಗಳು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ದಟ್ಟ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ತಲುಪಿದಾಗ ದುಷ್ಕರ್ಮಿಗಳು ಅದನ್ನು ಅಪಹರಿಸಿದ್ದಾರೆ. ಮೂಲಗಳ ಪ್ರಕಾರ, ಈ ಬೃಹತ್ ಮೊತ್ತದ ಹಣವು ಮಹಾರಾಷ್ಟ್ರದ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಅವರಿಗೆ ಸೇರಿದ್ದೆಂದು ತಿಳಿದುಬಂದಿದೆ.
ದರೋಡೆ ನಡೆದು ಹಲವು ತಿಂಗಳುಗಳೇ ಕಳೆದಿದ್ದರೂ ಇಷ್ಟು ದಿನಗಳ ಕಾಲ ಈ ವಿಷಯವನ್ನು ಮುಚ್ಚಿಡಲಾಗಿತ್ತು. ಈಗ ಅಧಿಕೃತವಾಗಿ ದಾಖಲೆಗಳಲ್ಲಿ 400 ಕೋಟಿ ರೂಪಾಯಿ ಸಾಗಾಟದ ಉಲ್ಲೇಖವಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ನಿಷೇಧಿತ ನೋಟುಗಳೇ ಅಷ್ಟು ದೊಡ್ಡ ಮಟ್ಟದಲ್ಲಿ ಸಾಗಾಟವಾಗುತ್ತಿದ್ದದ್ದು ಹೇಗೆ ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಇದು ಅಂತಾರಾಜ್ಯ ಮಟ್ಟದ ಅಪರಾಧವಾಗಿರುವುದರಿಂದ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪೊಲೀಸರು ಜಂಟಿಯಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಘಾಟ್ ಪ್ರದೇಶದ ಅಪಾಯಕಾರಿ ಹಾದಿಯಲ್ಲಿ ಕಂಟೇನರ್‌ಗಳು ನಾಪತ್ತೆಯಾಗಿರುವ ಬಗ್ಗೆ ತೀವ್ರ ಶೋಧ ನಡೆಸಲಾಗುತ್ತಿದೆ.



