March 1, 2026
Sunday, March 1, 2026
spot_img

ಕರಾವಳಿಗೂ ತಟ್ಟಿದ ಯುದ್ಧದ ಬಿಸಿ: ಬಹ್ರೇನ್ ನಲ್ಲಿ ಭಯಾನಕ ಸ್ಥಿತಿ ಎದುರಿಸುತ್ತಿದೆ ಉಡುಪಿಯ ಕುಟುಂಬ

ಹೊಸ ದಿಗಂತ ವರದಿ, ಉಡುಪಿ:

ಅರಬ್ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಭೀಕರತೆ ಇದೀಗ ಕರಾವಳಿಯ ಕುಟುಂಬಗಳ ನೆಮ್ಮದಿ ಕೆಡಿಸಿದ್ದು, ಬಹ್ರೇನ್‌ನ ಬ್ಯಾರನ್‌ನಲ್ಲಿ ನೆಲೆಸಿರುವ ಉಡುಪಿ ಜಿಲ್ಲೆಯ ತೆಕ್ಕಟ್ಟೆ ಮೂಲದ ಕುಟುಂಬವೊಂದು ಭೀಕರ ಸ್ಫೋಟದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಶನಿವಾರ ಬೆಳಿಗ್ಗೆ ೧೦ ಗಂಟೆಯ ಸುಮಾರಿಗೆ ಈ ಭಾಗದಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ತೆಕ್ಕಟ್ಟೆ ಮೂಲದ ಅಶೋಕ್ ಶೆಟ್ಟಿ, ಅವರ ಪತ್ನಿ ಅಕ್ಷತಾ ಶೆಟ್ಟಿ ಹಾಗೂ ಅಶೋಕ್ ಶೆಟ್ಟಿ ಅವರ ಸಹೋದರ ರವೀಂದ್ರ ಶೆಟ್ಟಿ ಅವರು ಪ್ರಸ್ತುತ ಬ್ಯಾರನ್‌ನಲ್ಲಿ ನೆಲೆಸಿದ್ದಾರೆ. ಸ್ಫೋಟ ಸಂಭವಿಸಿದ ತಕ್ಷಣವೇ ಪ್ರಾಣಾಪಾಯದಿಂದ ಪಾರಾಗಲು ಈ ಕುಟುಂಬವು ಸುರಕ್ಷಿತ ಸ್ಥಳದತ್ತ ಧಾವಿಸಿದೆ. ಈ ಸಂದರ್ಭದಲ್ಲಿ ಅಕ್ಷತಾ ಶೆಟ್ಟಿ ಅವರು ಸುಮಾರು ೭ ಕಿಲೋಮೀಟರ್ ದೂರದವರೆಗೆ ಓಡಿ ಹೋಗಿ ಸುರಕ್ಷಿತ ನೆಲೆ ತಲುಪುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ. ಪ್ರಸ್ತುತ ಈ ಕುಟುಂಬವು ಯುದ್ಧದ ಭೀತಿಯ ನಡುವೆಯೇ ಅಲ್ಲಿ ಕಾಲ ಕಳೆಯುವಂತಾಗಿದೆ.

ಘಟನೆಯ ಕುರಿತು ಈ ಕುಟುಂಬವು ಈಗಾಗಲೇ ಭಾರತೀಯ ರಾಯಭಾರ ಕಚೇರಿ ಹಾಗೂ ಉಡುಪಿ ಜಿಲ್ಲಾ ಸಹಾಯವಾಣಿಗೆ ಶನಿವಾರ ರಾತ್ರಿಯೇ ಇಮೇಲ್ ಮೂಲಕ ಮಾಹಿತಿ ರವಾನಿಸಿದೆ. ಜಿಲ್ಲಾಡಳಿತವು ಈಗಾಗಲೇ ಇವರ ಮಾಹಿತಿಯನ್ನು ಪಡೆದುಕೊಂಡಿದ್ದು, ಅವರ ಸುರಕ್ಷತೆಯ ಬಗ್ಗೆ ನಿಗಾ ವಹಿಸಿದೆ.

ಅರಬ್ ರಾಷ್ಟ್ರಗಳ ರಾಜಧಾನಿ ನಗರಗಳ ಮೇಲೆ ನಿರಂತರ ದಾಳಿಯ ಭೀತಿ ಇರುವುದರಿಂದ, ಅಲ್ಲಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಕ್ಷಿಸುವಂತೆ ರಾಯಭಾರ ಕಚೇರಿಗೆ ಮನವಿ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !