Sunday, November 2, 2025

ಕರ್ಕಿ ನೇಪಾಳ ಪಿಎಂ ಆಗ್ತಿದ್ದಂಗೆ ಮುನ್ನಲೆಗೆ ಬಂತು ಹೈಜಾಕ್ ಕೇಸ್: ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ಜೆನ್ ಝೀ ಯುವಕರ ಭಾರಿ ಪ್ರತಿಭಟನೆಯ ಪರಿಣಾಮ ಸರ್ಕಾರವೇ ಅಸ್ಥಿರಗೊಂಡು, ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿದ್ದ ಕರ್ಕಿ, ಇದೀಗ ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆದರೆ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ, ಸುಮಾರು ಐದು ದಶಕಗಳ ಹಿಂದೆ ನಡೆದ ವಿಮಾನ ಹೈಜಾಕ್ ಪ್ರಕರಣ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಈ ಪ್ರಕರಣಕ್ಕೆ ಕರ್ಕಿಯವರಿಗೂ ನಂಟಿದೆ. ಏಕೆಂದರೆ ಅವರ ಪತಿ ದುರ್ಗಾ ಪ್ರಸಾದ್ ಸುಬೇದಿ, ನೇಪಾಳ ಕಾಂಗ್ರೆಸ್ ಪಕ್ಷದ ಯುವ ನಾಯಕನಾಗಿದ್ದ ಕಾಲದಲ್ಲಿ ಹೈಜಾಕ್ ಯೋಜನೆಯಲ್ಲಿ ನೇರವಾಗಿ ಭಾಗಿಯಾಗಿದ್ದರು. 1973ರ ಜೂನ್ 10ರಂದು ನಡೆದ ಈ ಘಟನೆಯಲ್ಲಿ ಗಿರಿಜಾ ಪ್ರಸಾದ್ ಕೊಯಿರಾಲ ನೇತೃತ್ವದ ತಂಡ ಬಿರತ್‌ನಗರದಿಂದ ಕಠ್ಮಂಡುವಿಗೆ ಹೊರಟಿದ್ದ ನೇಪಾಳ ಏರ್‌ಲೈನ್ಸ್ ವಿಮಾನವನ್ನು ಬಿಹಾರದ ಫೋರ್ಬೆಸ್‌ಗಂಜ್‌ನಲ್ಲಿ ಇಳಿಸುವ ಮೂಲಕ ದೊಡ್ಡ ಸಂಚು ರೂಪಿಸಿತ್ತು.

ಈ ವಿಮಾನದಲ್ಲೇ ಆ ಕಾಲದ ಬಾಲಿವುಡ್ ಖ್ಯಾತ ನಟಿ ಮಾಲಾ ಸಿನ್ಹ ಇದ್ದರು. ಪೈಲೆಟ್‌ಗೆ ಪಿಸ್ತೂಲ್ ತೋರಿಸಿ ವಿಮಾನವನ್ನು ಹೈಜಾಕ್ ಮಾಡಲಾಗಿತ್ತು. ಯಾವುದೇ ಪ್ರಯಾಣಿಕರಿಗೆ ಹಾನಿಯಾಗದಿದ್ದರೂ, ರಾಜರ ಆಡಳಿತ ವಿರೋಧಿ ಶಸ್ತ್ರ ಹೋರಾಟಕ್ಕೆ ಹಣ ಒದಗಿಸಲು ಈ ಕ್ರಮ ಕೈಗೊಳ್ಳಲಾಗಿತ್ತು. ಸುಮಾರು $400,000 ಹಣಕ್ಕೆ ಬೇಡಿಕೆ ಇಡಲಾಗಿತ್ತು. ನಂತರ ಹಣ ಪಡೆದು ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡಲಾಯಿತು.

ಈ ಪ್ರಕರಣದಲ್ಲಿ ಭಾಗಿಯಾಗಿದ್ದವರು ಕೆಲವೇ ದಿನಗಳಲ್ಲಿ ಭಾರತದಲ್ಲೇ ಬಂಧಿತರಾದರು. ಸುಬೇದಿ ಸೇರಿದಂತೆ ಹಲವು ಆರೋಪಿಗಳು ಎರಡು ವರ್ಷಗಳ ಕಾಲ ಭಾರತೀಯ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು. ನಂತರ ಅವರು ರಾಜಕೀಯದಿಂದ ದೂರ ಸರಿದು ಉದ್ಯಮದಲ್ಲಿ ತೊಡಗಿಸಿಕೊಂಡರು.

error: Content is protected !!