February 12, 2026
Thursday, February 12, 2026
spot_img

ಓಮನ್ ಮೇಲೆ ಸವಾರಿ ಮಾಡಿದ ಆತಿಥೇಯರು: ಭಾರತಕ್ಕೂ ಸಾಧ್ಯವಾಗದ ದಾಖಲೆ ಬರೆದ ಲಂಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ ಆತಿಥೇಯ ರಾಷ್ಟ್ರ ಶ್ರೀಲಂಕಾ ತನ್ನ ಅಜೇಯ ಆಟವನ್ನು ಮುಂದುವರಿಸಿದೆ. ಪಂದ್ಯಾವಳಿಯ 16ನೇ ಪಂದ್ಯದಲ್ಲಿ ಓಮನ್ ತಂಡವನ್ನು ಅಕ್ಷರಶಃ ಧೂಳೀಪಟ ಮಾಡಿದ ಲಂಕಾ ಪಡೆ, 105 ರನ್​ಗಳ ಬೃಹತ್ ಅಂತರದ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಿದೆ. ಈ ಆವೃತ್ತಿಯಲ್ಲಿ 100ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಲಂಕಾ ಪಾತ್ರವಾಗಿದೆ.

ಆರಂಭಿಕ ಆಘಾತದ ಹೊರತಾಗಿಯೂ ಶ್ರೀಲಂಕಾ 20 ಓವರ್‌ಗಳಲ್ಲಿ 225 ರನ್ಗಳ ಬೃಹತ್ ಮೊತ್ತ ಪೇರಿಸಿತು.

ದಸುನ್ ಶನಕ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಶ್ರೀಲಂಕಾ ಪರ ಟಿ20 ವಿಶ್ವಕಪ್‌ನಲ್ಲಿ ‘ವೇಗದ ಫಿಫ್ಟಿ’ ಬಾರಿಸಿದ ದಾಖಲೆ ಬರೆದರು. ಕುಸಲ್ ಮೆಂಡಿಸ್ (61 ರನ್, 45 ಎಸೆತ) ಮತ್ತು ಪವನ್ ರತ್ನಾಯಕೆ (24 ಎಸೆತಗಳಲ್ಲಿ ಅರ್ಧಶತಕ) ಓಮನ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು.

226 ರನ್‌ಗಳ ಗುರಿ ಬೆನ್ನಟ್ಟಿದ ಓಮನ್, ಲಂಕಾ ಬೌಲರ್‌ಗಳ ದಾಳಿಗೆ ತತ್ತರಿಸಿ 120 ರನ್ಗಳಿಗೆ ಆಲೌಟ್ ಆಯಿತು. ಮೊಹಮ್ಮದ್ ನದೀಮ್ (53) ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲು ಸಾಧ್ಯವಾಗಲಿಲ್ಲ.

ದುಷ್ಮಂತ ಚಮೀರ ಮತ್ತು ಮಹೀಶ್ ತೀಕ್ಷಣ ತಲಾ 2 ವಿಕೆಟ್ ಕಿತ್ತು ಓಮನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಬಾರಿಗೆ 100ಕ್ಕೂ ಹೆಚ್ಚು ರನ್‌ಗಳ ಗೆಲುವು ಸಾಧಿಸಿದೆ. ಈ ಹಿಂದೆ 2007ರಲ್ಲಿ ಕೀನ್ಯಾ ವಿರುದ್ಧ 172 ರನ್‌ಗಳಿಂದ ಗೆದ್ದಿದ್ದ ಲಂಕಾ, ಈಗ 19 ವರ್ಷಗಳ ನಂತರ ಆ ಸಾಧನೆಯನ್ನು ಮರುಕಳಿಸಿದೆ. ವಿಶೇಷವೆಂದರೆ, ಬಲಿಷ್ಠ ಭಾರತ ತಂಡವೂ ಈವರೆಗೆ ಟಿ20 ವಿಶ್ವಕಪ್‌ನಲ್ಲಿ 100 ರನ್‌ಗಳ ಅಂತರದ ಗೆಲುವು ದಾಖಲಿಸಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !