ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೃಹಲಕ್ಷ್ಮಿ ಯೋಜನೆಯ ನೆರವಿನಿಂದ ರಾಯಚೂರಿನಲ್ಲಿ ಗೃಹಿಣಿಯೊಬ್ಬರು ಫ್ರಿಡ್ಜ್ ಖರೀದಿಸಿದ್ದಾರೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ನಡುಲಮನಿ, ಸರ್ಕಾರದಿಂದ ಪ್ರತಿ ತಿಂಗಳು ದೊರೆಯುತ್ತಿದ್ದ ಗೃಹಲಕ್ಷ್ಮಿ ಯೋಜನೆಯ 2,000 ರೂ. ಹಣವನ್ನು ಸಂಗ್ರಹಿಸಿ ಫ್ರಿಡ್ಜ್ ಖರೀದಿಸಿದ್ದಾರೆ.
ಹನುಮಮ್ಮ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಒಟ್ಟು 23 ಕಂತುಗಳ ಹಣವನ್ನು ಪಡೆದಿದ್ದು, ಆ ಹಣವನ್ನು ಖರ್ಚು ಮಾಡದೇ ಕೂಡಿಟ್ಟಿದ್ದರು. ಈ ಮೂಲಕ ಒಟ್ಟು 17 ಸಾವಿರ ರೂಪಾಯಿ ವೆಚ್ಚದಲ್ಲಿ ಫ್ರಿಡ್ಜ್ ಖರೀದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ತಮ್ಮ ಕುಟುಂಬದ ದಿನನಿತ್ಯದ ಜೀವನ ಸುಲಭವಾಗಿದ್ದು, ಆಹಾರ ವಸ್ತುಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲು ಅನುಕೂಲವಾಗಿದೆ ಎಂದು ಹನುಮಮ್ಮ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಬದುಕಿನಲ್ಲಿ ದೊಡ್ಡ ಬದಲಾವಣೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹನುಮಮ್ಮ ಹೇಳಿದ್ದಾರೆ.

