Wednesday, December 3, 2025

ಕಿಂಗ್ ಇಸ್ ಬ್ಯಾಕ್…ರಾಯ್​ಪುರದಲ್ಲೂ ವಿರಾಟ್ ಕೊಹ್ಲಿ ಭರ್ಜರಿ ಶತಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಂಚಿ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಟೀಂ ಇಂಡಿಯಾ ಗೆಲುವಿನ ರೂವಾರಿ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಇದೀಗ ರಾಯ್​ಪುರದಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.

ರಾಯ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಗಾಯಕ್ವಾಡ್ ಚೊಚ್ಚಲ ಶತಕ (105) ಬಾರಿಸಿದರೆ, ಕೊಹ್ಲಿ ತಮ್ಮ 53ನೇ ಏಕದಿನ ಶತಕವನ್ನು ಪೂರೈಸಿದರು. ಈ ಜೋಡಿಯ ಶತಕದ ಜೊತೆಯಾಟವು ಆರಂಭಿಕ ಕುಸಿತದ ನಂತರ ಭಾರತ ತಂಡಕ್ಕೆ ಆಸರೆಯಾಯಿತು

ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ 62 ರನ್‌ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವಿರಾಟ್ ಕೊಹ್ಲಿ ಆರಂಭದಿಂದಲೇ ಚುರುಕಿನ ಆಟಕ್ಕೆ ಒತ್ತು ನೀಡಿದರು. ಕೊಹ್ಲಿಗೆ ಗಾಯಕ್ವಾಡ್‌ ಉತ್ತಮ ಸಾಥ್ ನೀಡಿದರು.

ರಾಂಚಿ ಏಕದಿನ ಪಂದ್ಯದಲ್ಲಿ ಆಕರ್ಷಕ 135 ರನ್ ಸಿಡಿಸಿದ್ದ ವಿರಾಟ್ ಕೊಹ್ಲಿ, ಇದೀಗ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸುವ ಮೂಲಕ ಅಬ್ಬರಿಸಿದ್ದಾರೆ. ಕೇವಲ 90 ಎಸೆತಗಳನ್ನು ಎದುರಿಸಿದ ಕೊಹ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಏಕದಿನ ಕ್ರಿಕೆಟ್ ವೃತ್ತಿಜೀವನದ 53ನೇ ಶತಕ ಸಿಡಿಸಿ ಸಂಭ್ರಮಿಸಿದರು.

ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ ಗಾಯಕ್ವಾಡ್:
ದೇಶಿ ಕ್ರಿಕೆಟ್‌ನಲ್ಲಿ 17 ಶತಕ ಸಿಡಿಸಿ ಆಯ್ಕೆ ಸಮಿತಿಯ ಮನಗೆದ್ದು ಭಾರತ ತಂಡಕ್ಕೆ ಎಂಟ್ರಿಕೊಟ್ಟಿರುವ ಗಾಯಕ್ವಾಡ್, ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಕಳೆದ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದ ಗಾಯಕ್ವಾಡ್, ಎರಡನೇ ಏಕದಿನ ಪಂದ್ಯದಲ್ಲಿ ಸಾಕಷ್ಟು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಕೇವಲ 77 ಎಸೆತಗಳನ್ನು ಎದುರಿಸಿ ಗಾಯಕ್ವಾಡ್ ಚೊಚ್ಚಲ ಏಕದಿನ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಋತುರಾಜ್ ಗಾಯಕ್ವಾಡ್ 83 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 105 ರನ್ ಬಾರಿಸಿ ಮಾರ್ಕೊ ಯಾನ್ಸನ್‌ಗೆ ವಿಕೆಟ್‌ ಒಪ್ಪಿಸಿದರು.

error: Content is protected !!