ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಇದು ಸಂಭ್ರಮದ ಸಮಯ! ಟೀಮ್ ಇಂಡಿಯಾದ ರನ್ ಮಷೀನ್, ಮಾಜಿ ನಾಯಕ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ವಿಶ್ವದ ನಂಬರ್ ಒನ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದಾರೆ. ಬರೋಬ್ಬರಿ 1736 ದಿನಗಳ ದೀರ್ಘ ಕಾಯುವಿಕೆಯ ನಂತರ ವಿರಾಟ್ ತಮ್ಮ ಹಳೆಯ ಸಾಮ್ರಾಜ್ಯವನ್ನು ಮರಳಿ ಪಡೆದಿದ್ದಾರೆ.

ಕಳೆದ ಐದು ಇನ್ನಿಂಗ್ಸ್‌ಗಳಲ್ಲಿ ಸತತವಾಗಿ 50ಕ್ಕೂ ಹೆಚ್ಚು ರನ್ ಗಳಿಸಿರುವ ವಿರಾಟ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಸಿಡಿಸಿದ್ದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 93 ರನ್ ಬಾರಿಸುವ ಮೂಲಕ ಅಗ್ರಸ್ಥಾನಕ್ಕೇರಲು ದಾರಿ ಮಾಡಿಕೊಂಡರು. ಏಪ್ರಿಲ್ 13, 2021 ರಂದು ಅಗ್ರಸ್ಥಾನ ಕಳೆದುಕೊಂಡಿದ್ದ ಕೊಹ್ಲಿ, ಸುಮಾರು 4 ವರ್ಷ 9 ತಿಂಗಳ ನಂತರ ಮತ್ತೆ ಸಿಂಹಾಸನ ಅಲಂಕರಿಸಿದ್ದಾರೆ.
ವಿರಾಟ್ ಕೊಹ್ಲಿ ಸದ್ಯ ಮೊದಲ ಸ್ಥಾನದಲ್ಲಿದ್ದರೂ ಅವರಿಗೆ ಕೀವಿಸ್ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಅವರಿಂದ ತೀವ್ರ ಪೈಪೋಟಿ ಎದುರಾಗಿದೆ. ಮಿಚೆಲ್ ಕೇವಲ ಒಂದು ರೇಟಿಂಗ್ ಅಂಕದಷ್ಟು (784) ಕೊಹ್ಲಿಗಿಂತ ಹಿಂದಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಮಿಚೆಲ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಉಳಿಸಿಕೊಳ್ಳಬೇಕಾದರೆ ಕೊಹ್ಲಿ ತಮ್ಮ ರನ್ ಬೇಟೆಯನ್ನು ಮುಂದುವರಿಸಬೇಕಿದೆ.
ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿ
ವಿರಾಟ್ ಕೊಹ್ಲಿ (ಭಾರತ) 785
ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) 784
ರೋಹಿತ್ ಶರ್ಮಾ (ಭಾರತ) 775


