ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಸಿಂದೂರ ಸಂದರ್ಭದಲ್ಲಿ ಭಾರತೀಯ ಸೇನೆಗೆ ಮಾನವೀಯ ನೆರವು ನೀಡಿದ ಫಿರೋಜ್‌ಪುರದ ಬಾಲಕ ಶ್ರವಣ್ ಸಿಂಗ್‌ಗೆ ಮಕ್ಕಳಿಗೆ ನೀಡುವ ದೇಶದ ಅತ್ಯುನ್ನತ ಗೌರವವಾದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ನೀಡಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ 10 ವರ್ಷದ ಶ್ರವಣ್ ಸಿಂಗ್‌ಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಗಡಿ ಗ್ರಾಮ ಮಾಮ್‌ಡೋಟ್‌ನ ಶ್ರವಣ್ ಸಿಂಗ್, ಆಪರೇಷನ್ ಸಿಂದೂರ ವೇಳೆ ತಮ್ಮ ಮನೆಯ ಸಮೀಪ ನಿಯೋಜನೆಯಲ್ಲಿದ್ದ ಯೋಧರಿಗೆ ನೀರು, ಹಾಲು, ಚಹಾ, ಲಸ್ಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ದಿನನಿತ್ಯ ತಲುಪಿಸುತ್ತಿದ್ದ. ಪ್ರತಿದಿನ ಬೆಳಗ್ಗೆಯಿಂದಲೇ ಸೇನಾ ಪೋಸ್ಟ್‌ಗಳಿಗೆ ತೆರಳಿ, ಯಾವುದೇ ಭಯವಿಲ್ಲದೆ ಸೇವೆ ಸಲ್ಲಿಸಿದ್ದ ಈ ಬಾಲಕನ ನಡೆ ಸೈನಿಕರ ಮನ ಗೆದ್ದಿತ್ತು. ಯುದ್ಧೋನ್ಮಾದದ ವಾತಾವರಣ, ಶೆಲ್ ದಾಳಿ ಆತಂಕದ ನಡುವೆಯೂ ಶ್ರವಣ್ ತೋರಿದ ಧೈರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಆಪರೇಷನ್ ಸಿಂದೂರ ವೇಳೆ ಅವನ ಸೇವೆಯನ್ನು ಗಮನಿಸಿದ ಭಾರತೀಯ ಸೇನೆ ಈಗಾಗಲೇ ‘ಕಿರಿಯ ನಾಗರಿಕ ಯೋಧ’ ಗೌರವ ನೀಡಿತ್ತು. ಜೊತೆಗೆ ಶ್ರವಣ್ ಸಿಂಗ್‌ನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಸೇನೆ ಘೋಷಿಸಿದೆ. ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಶ್ರವಣ್, ಮುಂದೊಂದು ದಿನ ಸೈನಿಕನಾಗಿ ದೇಶ ಸೇವೆ ಮಾಡುವ ಕನಸನ್ನೂ ವ್ಯಕ್ತಪಡಿಸಿದ್ದಾನೆ.

