Wednesday, November 5, 2025

ಶಾಲೆಗೆ ಸಿಕ್ಕ ಬಿಸಿಯೂಟ ಭಾಗ್ಯ ಈಗ ಕಾಲೇಜು ಮೆಟ್ಟಿಲಿಗೆ: ರಾಜ್ಯ ಸರ್ಕಾರದಿಂದ ಬಂಪರ್ ಗಿಫ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರ ಕೈಗೊಳ್ಳಲು ಚಿಂತನೆ ನಡೆಸಿದ್ದು, ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಸಹ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಿದೆ. ಈಗಾಗಲೇ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಈ ಯೋಜನೆಯು ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಸಿಗುವ ಸಾಧ್ಯತೆ ಇದೆ.

ನವೆಂಬರ್ 14ರಂದು ಘೋಷಣೆ?

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಯೋಜನೆಯ ವಿಸ್ತರಣೆಗೆ ಮುಂದಾಗಿದ್ದು, ಮುಂಬರುವ ನವೆಂಬರ್ 14ರ ಮಕ್ಕಳ ದಿನಾಚರಣೆಯಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ.

ಯೋಜನೆ ವಿಸ್ತರಣೆಯ ಉದ್ದೇಶ:

ರಾಜ್ಯದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಭಾಗದವರು ಆಗಿರುವುದರಿಂದ, ಅವರಿಗೆ ಪೌಷ್ಟಿಕ ಆಹಾರದ ನೆರವು ನೀಡುವ ದೃಷ್ಟಿಯಿಂದ ಸರ್ಕಾರ ಈ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ಈಗಾಗಲೇ ಸರ್ಕಾರಿ ಪದವಿ ಪೂರ್ವ ವಿದ್ಯಾರ್ಥಿಗಳ ನಿಖರ ಸಂಖ್ಯೆಯ ಮಾಹಿತಿಯನ್ನು ಸಂಗ್ರಹಿಸಿದೆ.

ಯೋಜನೆಯ ಹಿನ್ನೆಲೆ:

ರಾಜ್ಯದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯು 2002-03ನೇ ಸಾಲಿನಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಆರಂಭವಾಯಿತು. ಮೊದಲು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತಿತ್ತು, ನಂತರ ಅದನ್ನು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು. ಸದ್ಯ, ಸರ್ಕಾರವು ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶಯುಕ್ತ ಆಹಾರದ ಭಾಗವಾಗಿ ತೊಗರಿಬೇಳೆ, ಸಂಸ್ಕರಿಸಿದ ತಾಳೆಎಣ್ಣೆ ಮತ್ತು ಕಡಲೆಬೇಳೆಗಳನ್ನೊಳಗೊಂಡ ಊಟವನ್ನು ಒದಗಿಸುತ್ತಿದೆ. ಪಿಯುಸಿ ವಿದ್ಯಾರ್ಥಿಗಳ ಬಿಸಿಯೂಟದ ಮೆನು ಹೇಗಿರಲಿದೆ ಎಂಬುದನ್ನು ಸರ್ಕಾರ ಇನ್ನಷ್ಟೇ ಪ್ರಕಟಿಸಬೇಕಿದೆ.

error: Content is protected !!