ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ರಾಜಕಾರಣದ ಪ್ರಭಾವಿ ನಾಯಕ, ಜೆಡಿಯುನ ಅನಂತ್ ಸಿಂಗ್ ಅವರು ನ್ಯಾಯಾಲಯದ ವಿಶೇಷ ಅನುಮತಿಯೊಂದಿಗೆ ಜೈಲಿನಿಂದ ಹೊರಬಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದುಲಾರ್‌ಚಂದ್ ಯಾದವ್ ಹತ್ಯೆ ಪ್ರಕರಣದಲ್ಲಿ ಕಳೆದ ಮೂರು ತಿಂಗಳಿನಿಂದ ಬೇವೂರ್ ಜೈಲಿನಲ್ಲಿದ್ದ ಇವರು, ಬಿಗಿ ಪೊಲೀಸ್ ಭದ್ರತೆಯ ನಡುವೆ ವಿಧಾನಸಭೆಗೆ ಆಗಮಿಸಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ತಕ್ಷಣ, ಅನಂತ್ ಸಿಂಗ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಈ ದೃಶ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಾನು ನಿರಪರಾಧಿ, ನ್ಯಾಯಾಂಗದ ಮೇಲೆ ನನಗೆ ನಂಬಿಕೆಯಿದೆ, ಖಂಡಿತವಾಗಿಯೂ ನನಗೆ ನ್ಯಾಯ ಸಿಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಸಂವಿಧಾನದ 188ನೇ ವಿಧಿಯ ಪ್ರಕಾರ ಶಾಸಕರೊಬ್ಬರು ಕಲಾಪದಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ ಮತ್ತು 193ನೇ ವಿಧಿಯ ಅನ್ವಯ ಪ್ರಮಾಣ ವಚನ ಸ್ವೀಕರಿಸದೆ ಸದನದ ಕಾರ್ಯಕಲಾಪಗಳಲ್ಲಿ ತೊಡಗುವಂತಿಲ್ಲ. ಈ ಸಾಂವಿಧಾನಿಕ ಅವಶ್ಯಕತೆಯನ್ನು ಪೂರೈಸಲು ಪಾಟ್ನಾ ಸಿವಿಲ್ ನ್ಯಾಯಾಲಯವು ಕೇವಲ ಪ್ರಮಾಣ ವಚನಕ್ಕಾಗಿ ಮಾತ್ರ ಅನುಮತಿ ನೀಡಿತ್ತು. ಜಾಮೀನು ಮಂಜೂರಾಗದ ಹಿನ್ನೆಲೆಯಲ್ಲಿ, ಪ್ರಕ್ರಿಯೆ ಮುಗಿದ ಕೂಡಲೇ ಅವರನ್ನು ಮರಳಿ ಜೈಲಿಗೆ ಕರೆದೊಯ್ಯಲಾಯಿತು.
ಒಬ್ಬ ಕೈದಿ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭವಾಗಿದ್ದರಿಂದ ವಿಧಾನಸಭೆ ಆವರಣದಲ್ಲಿ ಅಭೂತಪೂರ್ವ ಭದ್ರತೆ ಕಲ್ಪಿಸಲಾಗಿತ್ತು. ಸಿಸಿಟಿವಿ ಕಣ್ಗಾವಲು, ತ್ವರಿತ ಪ್ರತಿಕ್ರಿಯೆ ತಂಡಗಳು ಮತ್ತು ಹೆಚ್ಚುವರಿ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿತ್ತು. ಬೆಂಬಲಿಗರ ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿತ್ತು.



