ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡುವ ನೆಪದಲ್ಲಿ ಮೊಬೈಲ್ ಕಸಿದುಕೊಂಡು ಹಣ ದೋಚಿದ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತರನ್ನು ರಮೇಶ್ ಮತ್ತು ಮನು ಎಂದು ಗುರುತಿಸಲಾಗಿದೆ.
ಮೈಸೂರು ತಾಲೂಕಿನ ಕಡಕೊಳ ಸಮೀಪ ಗಣೇಶ್ ಎಂಬವರು ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ಮಧ್ಯರಾತ್ರಿ ಮನೆಗೆ ಮರಳುತ್ತಿದ್ದಾಗ ಅಪಘಾತಕ್ಕೊಳಗಾಗಿದ್ದರು. ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಗಣೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ನೆಪದಲ್ಲಿ ಆರೋಪಿಗಳು ಸ್ಥಳಕ್ಕೆ ಬಂದಿದ್ದಾರೆ. ಆದರೆ, ಸಹಾಯ ಮಾಡುವ ಬದಲು ಗಣೇಶ್ ಅವರ ಮೊಬೈಲ್‌ನ್ನು ತಮ್ಮ ಪಡೆದು, ಯುಪಿಐ ಮೂಲಕ 80 ಸಾವಿರ ರೂ. ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ.
ವಿಷಯ ತಿಳಿದ ಬಳಿಕ ಗಣೇಶ್ ಅವರ ಸಹೋದರ ಸ್ಥಳಕ್ಕೆ ಆಗಮಿಸಿ, ಗಾಯಗೊಂಡ ತಮ್ಮನನ್ನು ಆಸ್ಪತ್ರೆಗೆ ದಾಖಲಿಸಿ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಹಣ ವರ್ಗಾವಣೆ ವಿವರಗಳನ್ನು ಪರಿಶೀಲಿಸಿದ ಪೊಲೀಸರು, ಮೈಸೂರಿನ ಮಹದೇವಪುರ ನಿವಾಸಿಗಳಾದ ರಮೇಶ್ ಮತ್ತು ಮನುನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಬಂಧಿತರಿಂದ 80 ಸಾವಿರ ರೂ. ನಗದು ಹಾಗೂ ಎರಡು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

