March 31, 2026
Tuesday, March 31, 2026
spot_img

ಅಯ್ಯಪ್ಪನ ಸನ್ನಿಧಿಯಲ್ಲಿ ಹಳೆಯ ಪದ್ಧತಿಯೇ ಫೈನಲ್: ಸಂಪ್ರದಾಯ ರಕ್ಷಣೆಗೆ ಟಿಡಿಬಿ ಮಹತ್ವದ ನಿರ್ಧಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಶತಮಾನಗಳ ಸಂಪ್ರದಾಯ ಮತ್ತು ಪದ್ಧತಿಗಳನ್ನು ಉಳಿಸಲು ತಿರುವಾಂಕೂರು ದೇವಸ್ವಂ ಮಂಡಳಿ (TDB) ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ. 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ (ಗರ್ಭ ಧರಿಸುವ ವಯಸ್ಸಿನವರು) ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಮಂಡಳಿ ಅಧಿಕೃತವಾಗಿ ನಿರ್ಧರಿಸಿದೆ.

ಮಂಡಳಿಯ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಅಧ್ಯಕ್ಷ ಕೆ. ಜಯಕುಮಾರ್, “ಶಬರಿಮಲೆಯ ಆಚರಣೆ ಮತ್ತು ಭಕ್ತರ ನಂಬಿಕೆಗಳನ್ನು ಕಾಪಾಡುವುದು ನಮ್ಮ ಮೊದಲ ಆದ್ಯತೆ. 2018ರಲ್ಲಿ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ನಾವು ಈ ನಿರ್ಣಯ ಕೈಗೊಂಡಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನದ ಸಂಪ್ರದಾಯಗಳನ್ನು ಎತ್ತಿಹಿಡಿಯಲು ರಾಜ್ಯ ಸರ್ಕಾರವೂ ಸಾಥ್ ನೀಡಬೇಕು ಎಂದು ಮಂಡಳಿ ಕೋರಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಮಾರ್ಚ್ 14ರ ಒಳಗೆ ಮಂಡಳಿಯು ತನ್ನ ಈ ನಿಲುವನ್ನು ನ್ಯಾಯಾಲಯಕ್ಕೆ ಅಧಿಕೃತವಾಗಿ ಸಲ್ಲಿಸಲಿದೆ.

10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧವನ್ನು ಕಟ್ಟುನಿಟ್ಟಾಗಿ ಮುಂದುವರಿಸಲು ಮಂಡಳಿ ಸಜ್ಜಾಗಿದೆ.

ಕಳೆದ ತಿಂಗಳು ಸುಪ್ರೀಂ ಕೋರ್ಟ್, 2018ರ ತೀರ್ಪಿನ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಗಾಗಿ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಮಂಡಳಿಗೆ ಸೂಚಿಸಿತ್ತು. ಇದೀಗ ಟಿಡಿಬಿ ಸಂಪ್ರದಾಯದ ಪರವಾಗಿ ನಿಂತಿರುವುದು ಭಕ್ತ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !