ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವರ್ಷಗಳಷ್ಟು ಹಳೆಯದಾದ ಇಸ್ರೇಲ್-ಗಾಜಾ ಸಂಘರ್ಷವನ್ನು ಕೊನೆಗೊಳಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮಗ್ರ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.
ಟ್ರಂಪ್ ಅವರ ಯೋಜನೆ ಪ್ಯಾಲೆಸ್ಟೀನಿಯನ್ ಮತ್ತು ಇಸ್ರೇಲ್ ಜನರಿಗೆ “ದೀರ್ಘಕಾಲೀನ ಮತ್ತು ಸುಸ್ಥಿರ ಶಾಂತಿ”ಗೆ ಮಾರ್ಗವನ್ನು ಒದಗಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.
ಎಕ್ಸ್ ಪೋಸ್ಟ್ ಅನ್ನು ಹಂಚಿಕೊಂಡ ಪ್ರಧಾನಿ, “ಗಾಜಾ ಸಂಘರ್ಷವನ್ನು ಕೊನೆಗೊಳಿಸಲು ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರ ಸಮಗ್ರ ಯೋಜನೆಯ ಘೋಷಣೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ಯಾಲೆಸ್ಟೀನಿಯನ್ ಮತ್ತು ಇಸ್ರೇಲಿ ಜನರಿಗೆ ಹಾಗೂ ವಿಶಾಲವಾದ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ದೀರ್ಘಕಾಲೀನ ಮತ್ತು ಸುಸ್ಥಿರ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಕಾರ್ಯಸಾಧ್ಯವಾದ ಮಾರ್ಗವನ್ನು ಒದಗಿಸುತ್ತದೆ” ಎಂದು ಬರೆದಿದ್ದಾರೆ.
“ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಭದ್ರಪಡಿಸಿಕೊಳ್ಳಲು ಅಧ್ಯಕ್ಷ ಟ್ರಂಪ್ ಅವರ ಈ ಉಪಕ್ರಮದ ಹಿಂದೆ ಸಂಬಂಧಪಟ್ಟವರೆಲ್ಲರೂ ಒಟ್ಟಾಗಿ ಬರುತ್ತಾರೆ ಮತ್ತು ಬೆಂಬಲ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಲಾಗಿದೆ.