Friday, November 28, 2025

ಕುರ್ಚಿ ಕದನಕ್ಕೆ ಮಠದ ‘ಶಕ್ತಿ’ ಸ್ಪರ್ಶ: ಡಿಕೆಶಿಗೆ ಸಿಎಂ ಪಟ್ಟ ನೀಡಲು ಆದಿಚುಂಚನಗಿರಿ ಶ್ರೀಗಳ ಆಗ್ರಹ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ತಮ್ಮ ಬಣದ ಶಾಸಕರನ್ನು ದೆಹಲಿಗೆ ಕಳುಹಿಸಿ ಹೈಕಮಾಂಡ್‌ನ ಗಮನ ಸೆಳೆಯಲು ಡಿಕೆಶಿ ಪ್ರಯತ್ನಿಸಿದ್ದು, ಇದೀಗ ಈ ‘ಕುರ್ಚಿ ಕದನ’ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಪ್ರವೇಶವಾಗಿದ್ದು, ಮುಖ್ಯಮಂತ್ರಿ ಸ್ಥಾನ ಡಿಕೆಶಿಗೆ ಸಿಗಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂದೂರಿನಲ್ಲಿ ಮಾತನಾಡಿದ ಶ್ರೀಗಳು, “ಸಿಎಂ ಆಗುವ ಸಂಬಂಧ ಡಿಕೆಶಿ ನಮ್ಮೊಂದಿಗೆ ಮಾತನಾಡದೇ ಇರಬಹುದು. ಆದರೆ ಸಾವಿರಾರು ಭಕ್ತರು ನಮಗೆ ಕರೆ ಮಾಡಿ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ನಮ್ಮ ಸಮುದಾಯದ ಒಬ್ಬರು ಸಿಎಂ ಆಗುತ್ತಾರೆಂದು ನಾವೂ ಬೆಂಬಲ ನೀಡಿದ್ದೆವು. ಅವರು ಹೇಳಿದ ಪ್ರಕಾರ ಎರಡುವರೆ ವರ್ಷಗಳ ಬಳಿಕ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಸಿಗುವ ಆಶಾಭಾವನೆ ಇತ್ತು. ಆದರೆ ಅದು ಈಡೇರುವಂತೆ ಕಾಣುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.

‘ಅವಕಾಶ ತಪ್ಪಿದರೆ ರಾಜ್ಯದ ಅಭಿವೃದ್ಧಿಗೆ ಕ್ಷೇಮಕರ ಅಲ್ಲ’:

“ಡಿಕೆ ಶಿವಕುಮಾರ್ ಅವರಿಗೆ ಸಿಎಂ ಅವಕಾಶ ಸಿಗದಿದ್ದರೆ ಭಕ್ತರಿಗೆ ಬಹಳ ಬೇಸರವಾಗುತ್ತದೆ. ಈ ಬೆಳವಣಿಗೆ ರಾಜ್ಯದ ಅಭಿವೃದ್ಧಿಗೆ ಕ್ಷೇಮಕರವಲ್ಲ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಸರಿಯಾದ ಮತ್ತು ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಬೇಕು. ಪಕ್ಷದ ಶಿಸ್ತಿನ ಸಿಪಾಯಿಯಂತೆ ಡಿಕೆಶಿ ಅವರು ಪಕ್ಷಕ್ಕಾಗಿ ಕಷ್ಟಪಟ್ಟು ದುಡಿದಿದ್ದಾರೆ. ಹೀಗಾಗಿ, ಅವರಿಗೂ ಒಂದು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ನೀಡಬೇಕು,” ಎಂದು ಸ್ವಾಮೀಜಿ ಒತ್ತಾಯಿಸಿದರು.

“ಉಳಿದ ಎರಡುವರೆ ವರ್ಷಗಳ ಕಾಲ ಡಿಕೆಶಿ ಅವರಿಗೆ ಸಿಎಂ ಸ್ಥಾನವನ್ನು ನೀಡಬೇಕು ಎಂಬುದು ಎಲ್ಲರ ಒಕ್ಕೊರಲ ಕೂಗು,” ಎಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಗ್ರಹಿಸುವ ಮೂಲಕ, ಹೈಕಮಾಂಡ್ ಮೇಲೆ ಸಾರ್ವಜನಿಕವಾಗಿ ಒತ್ತಡ ಹೇರಿದಂತಾಗಿದೆ. ಇದು ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಸಿಎಂ ಸ್ಥಾನದ ಚರ್ಚೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.

error: Content is protected !!