ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿ 29 ರನ್‌ಗಳ ಅಂತರದಲ್ಲಿ ಗೆಲುವು ದಾಖಲಿಸಿದೆ. ಆರಂಭದಲ್ಲೇ ವಿಕೆಟ್‌ಗಳು ಸರಸರನೆ ಬೀಳುತ್ತಿದ್ದ ಕಾರಣ ಭಾರತ ಸಂಕಷ್ಟಕ್ಕೆ ಸಿಲುಕಿತ್ತು.
77 ರನ್‌ಗೆ 6 ವಿಕೆಟ್ ಕಳೆದುಕೊಂಡಾಗ ನಾಯಕ ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತವಾಗಿ ಆಟವಾಡಿ ತಂಡವನ್ನು ಕಷ್ಟದಿಂದ ಹೊರತೆಗೆದರು. 49 ಎಸೆತಗಳಲ್ಲಿ ಅಜೇಯ 84 ರನ್‌ಗಳ ಇನಿಂಗ್ಸ್ ಮೂಲಕ ಭಾರತ 20 ಓವರ್‌ಗಳಲ್ಲಿ 161 ರನ್‌ಗಳನ್ನು ಕಲೆಹಾಕಿತು.
ಗುರಿ ಬೆನ್ನಟ್ಟಿದ ಯುಎಸ್‌ಎ ತಂಡ 132 ರನ್‌ಗಳಿಗೆ ಸೀಮಿತಗೊಂಡಿದ್ದು, ಭಾರತಕ್ಕೆ ಸುಲಭ ಜಯ ದೊರಕಿತು.
ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್ ಯಾದವ್, ಆರಂಭದಲ್ಲೇ ವಿಕೆಟ್‌ಗಳು ಬೀಳುತ್ತಿದ್ದರಿಂದ ಒತ್ತಡ ಹೆಚ್ಚಿತ್ತು ಎಂದು ಹೇಳಿದರು. ಆದರೆ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದರೆ ಪಂದ್ಯವನ್ನು ಬದಲಾಯಿಸಬಲ್ಲೆ ಎಂಬ ವಿಶ್ವಾಸ ನನಗಿತ್ತು ಎಂದರು. ಪಿಚ್ ಸ್ವಲ್ಪ ವಿಭಿನ್ನವಾಗಿದ್ದರೂ, ತಂಡ ಇನ್ನೂ ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು ಎಂಬುದನ್ನು ಒಪ್ಪಿಕೊಂಡ ಅವರು, ಈ ಪಂದ್ಯದಿಂದ ಪಾಠಗಳನ್ನು ಕಲಿದು ಮುಂದಿನ ಪಂದ್ಯದಲ್ಲಿ ಇನ್ನಷ್ಟು ಶಕ್ತಿಯಾಗಿ ಮರಳುವುದಾಗಿ ತಿಳಿಸಿದರು.



