Friday, November 7, 2025

ಯಾರ ಮಾತಿಗೂ ನಿಲ್ಲದ ಕಬ್ಬು ಬೆಳೆಗಾರರ ದರ ಸಮರ! ಇಂದು ಕೂಡ ಮುಂದುವರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಸಚಿವ ಶಿವಾನಂದ್ ಪಾಟೀಲ್ ಸ್ಥಳಕ್ಕೆ ಭೇಟಿ, ಮಾತುಕತೆ ನಡೆಸಿದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿಲ್ಲ.

ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು ಗುರುವಾರ ತಡರಾತ್ರಿ ಗುರ್ಲಾಪುರದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಉದ್ದೇಶಿತ ರಸ್ತೆ ತಡೆಯನ್ನು ಹಿಂತೆಗೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಶುಕ್ರವಾರ ಸಂಜೆಯೊಳಗೆ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭರವಸೆಯನ್ನು ಸಚಿವರು ರೈತರಿಗೆ ತಿಳಿಸಿದರು. ಆದರೂ ರೈತರು ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಲು ಒಪ್ಪಿಗೆ ನೀಡಿಲ್ಲ.

ನಾಳೆ ರಸ್ತೆಗಳನ್ನು ತಡೆಯಬೇಡಿ ಎಂದು ನಾನು ನಿಮ್ಮನ್ನು ವಿನಂತಿಸುತ್ತೇನೆ. ಶಾಶ್ವತ ಪರಿಹಾರವನ್ನು ತರಲು ಸಿಎಂ ಕೇವಲ ಒಂದು ದಿನದ ಸಮಯವನ್ನು ಕೇಳಿದ್ದಾರೆ ಎಂದು ಪಾಟೀಲ್ ಅವರು ಪ್ರತಿಭಟನಾಕಾರರನ್ನು ಒತ್ತಾಯಿಸಿದರು.

ಆದರೆ, ಸಚಿವರ ಮನವಿಗೆ ರೈತರು ಕಿವಿಗೊಡದ ರೈತರು, ಪ್ರತಿ ಟನ್ ಕಬ್ಬಿಗೆ 3,500 ದರ ನಿಗದಿ ಮಾಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದು ಪಟ್ಟ ಹಿಡಿದಿದ್ದಾರೆ.

ಶುಕ್ರವಾರ ಸಂಜೆಯೊಳಗೆ ಮುಖ್ಯಮಂತ್ರಿ 3,500 ರೂ. ದರವನ್ನು ಘೋಷಿಸದಿದ್ದರೆ ಪ್ರತಿಭಟನೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ ಎಂದು ಚೋನಪ್ಪ ಪೂಜಾರಿ ನೇತೃತ್ವದ ರೈತರು ಘೋಷಿಸಿದ್ದಾರೆ. ಅಲ್ಲದೆ, ಒಂದು ದಿನದ ಮಟ್ಟಿಗೆ ರಸ್ತೆ ತಡೆ ನಿಲ್ಲಿಸಲು ಒಪ್ಪಿಗೆ ನೀಡಿದ್ದಾರೆ.

ನಮ್ಮ ಬೇಡಿಕೆಯನ್ನು ಮತ್ತೆ ನಿರ್ಲಕ್ಷಿಸಿದರೆ, ಕರ್ನಾಟಕದಾದ್ಯಂತ ಲಕ್ಷಾಂತರ ರೈತರು ಬೆಳಗಾವಿಗೆ ಮೆರವಣಿಗೆ ನಡೆಸಲಿದ್ದಾರೆ. ಸರ್ಕಾರ ಟನ್‌ಗೆ 3,500 ರೂ. ಘೋಷಿಸಿದ ಕ್ಷಣದಿಂದಲೇ ನಾವು ಪ್ರತಿಭಟನೆಯನ್ನು ಕೊನೆಗೊಳಿಸಲು ಸಿದ್ಧರಿದ್ದೇವೆ, ಆದರೆ ಅದಕ್ಕೂ ಮೊದಲು ಸಾಧ್ಯವೇ ಇಲ್ಲ ಎಂದು ಪೂಜಾರಿ ಹೇಳಿದ್ದಾರೆ.

error: Content is protected !!