Monday, September 1, 2025

ಇನ್ಮುಂದೆ ರಾಜಭವನ ವೀಕ್ಷಣೆಗೂ ಇದೆ ಸಾರ್ವಜನಿಕರಿಗೆ ಅವಕಾಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಆಡಳಿತ ಶಕ್ತಿ ಕೇಂದ್ರವಾದ ವಿಧಾನಸೌಧವನ್ನು ಜನಸಾಮಾನ್ಯರ ವೀಕ್ಷಣೆಗೆ ಮುಕ್ತಗೊಳಿಸಿದ ಸರ್ಕಾರ ಈಗ ಮತ್ತೊಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. 19ನೇ ಶತಮಾನದಲ್ಲಿ ನಿರ್ಮಾಣಗೊಂಡು ಇಂದಿಗೂ ತನ್ನ ವೈಭವವನ್ನು ಉಳಿಸಿಕೊಂಡಿರುವ ರಾಜಭವನವನ್ನು ಕೂಡ ಶೀಘ್ರದಲ್ಲೇ ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಈ ಮೂಲಕ ರಾಜಭವನವನ್ನು ಕಣ್ತುಂಬಿಕೊಳ್ಳಬೇಕೆಂಬ ಜನರ ಹಳೆಯ ಕನಸು ನೆರವೇರಲಿದೆ.

ಐತಿಹಾಸಿಕ ಕಟ್ಟಡ:
1840-1842 ರ ಅವಧಿಯಲ್ಲಿ ಸರ್ ಮಾರ್ಕ್ ಕಬ್ಬನ್ ನಿರ್ಮಿಸಿದ ರಾಜಭವನವನ್ನು ಮೂಲತಃ ಬ್ರಿಟಿಷ್ ಆಯುಕ್ತರ ನಿವಾಸವಾಗಿ ಬಳಸಲಾಗುತ್ತಿತ್ತು. ಆ ಕಾಲದಲ್ಲಿ ‘ರೆಸಿಡೆನ್ಸಿ’ ಎಂದೇ ಕರೆಯಲ್ಪಟ್ಟ ಈ ಕಟ್ಟಡವನ್ನು ನಂತರ ಗಣ್ಯರಿಗೆ ಆತಿಥ್ಯ ವಹಿಸುವ ಅತಿಥಿ ಗೃಹವಾಗಿ ಪರಿವರ್ತಿಸಲಾಯಿತು. ಭಾರತದ ಮೊದಲ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಎಲೀನರ್ ರೂಸ್ವೆಲ್ಟ್ ಸೇರಿದಂತೆ ಅನೇಕರನ್ನು ಇಲ್ಲಿ ಆತಿಥ್ಯ ನೀಡಲಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ರಾಜಭವನದೊಳಗೆ ವಿಶೇಷ ವಾಕಿಂಗ್ ಟೂರ್ ಪ್ರಾರಂಭಿಸಲು ತಯಾರಿ ನಡೆಸಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಈಗಾಗಲೇ ಇದಕ್ಕೆ ಅಧಿಕೃತ ಅನುಮೋದನೆ ನೀಡಿದ್ದಾರೆ. ಪ್ರವಾಸ ಮಾರ್ಗ, ವೀಕ್ಷಣಾ ಸಮಯ ಮತ್ತು ಸಂದರ್ಶಕರಿಗೆ ಅನುಕೂಲಕರ ಸ್ಥಳಗಳನ್ನು ಗುರುತಿಸುವ ಕಾರ್ಯ ಸದ್ಯ ಪ್ರಗತಿಯಲ್ಲಿದೆ ಎಂದು ನಿಗಮದ ಜನರಲ್ ಮ್ಯಾನೇಜರ್ ಶ್ರೀನಾಥ್ ಕೆ.ಎಸ್ ತಿಳಿಸಿದ್ದಾರೆ.

ಇತ್ತೀಚೆಗೆ ಸಾರ್ವಜನಿಕರಿಗೆ ವಿಧಾನಸೌಧ ಪ್ರವಾಸ ಆರಂಭವಾಗಿದ್ದು ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅದರಂತೆಯೇ ರಾಜಭವನ ಪ್ರವಾಸವೂ ಯಶಸ್ವಿಯಾಗುವ ನಿರೀಕ್ಷೆ ಇದೆ. ಜನರಿಗೆ ಇತಿಹಾಸದ ನೆನಪನ್ನು ನೇರವಾಗಿ ಅನುಭವಿಸುವ ಅಪರೂಪದ ಅವಕಾಶ ಇದಾಗಲಿದೆ.

ಇದನ್ನೂ ಓದಿ