ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಪ್ರವಾಹ ವಿಪತ್ತಿನ ಮುನ್ಸೂಚನೆ ನೀಡಲು ಹಾಗೂ ನಿಯಂತ್ರಿಸಲು ನೆರವಾಗಲು ಸ್ಥಾಪಿಸಿದ್ದ ಟೆಲಿಮೆಟ್ರಿಕ್ ಉಪಕರಣಗಳೇ ಕಾರ್ಯನಿವರ್ಹಿಸುತ್ತಿಲ್ಲ ಎಂಬ ಅಂಶ ಕಂಟ್ರೋಲರ್ ಆ್ಯಂಡ್ ಆಡಿಟರ್ ಜನರಲ್ (ಸಿಎಜಿ) ವರದಿಯಲ್ಲಿ ಬಹಿರಂಗವಾಗಿದೆ.
ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದ ಸಿಎಜಿ ವರದಿಯಲ್ಲಿ ವಿಪತ್ತು ನಿರ್ವಹಿಸಲು ಸ್ಥಾಪಿಸಲಾಗಿರುವ ಉಪಕರಣಗಳ ನಿಷ್ಕ್ರಿಯತೆ, ವಿಪತ್ತು ನಿರ್ವಹಣೆಗೆ ಅಗ್ನಿಶಾಮಕ ಇಲಾಖೆ ನೀಡಲಾಗಿದ್ದ ಅನುದಾನವನ್ನು ಬಳಸದೇ ಇರುವ ಬಗ್ಗೆ ಹಾಗೂ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದೇ ಇರುವ ಬಗ್ಗೆ ಪ್ರಸ್ತಾಪಿಸಲಾಗಿದೆ. ರಾಜಧಾನಿ ಬೆಂಗಳೂರಿನ ಪ್ರವಾಹ ಮನ್ಸೂಚನೆಗೆಂದು ಸ್ಥಾಪಿಸಲಾಗಿದ್ದ ಒಟ್ಟು 184 ಉಪಕರಣಗಳಲ್ಲಿ 69 ಉಪಕರಣಗಳು ಕಾರ್ಯನಿವರ್ಹಿಸುತ್ತಿಲ್ಲ ಎಂದು ಹೇಳಲಾಗಿದೆ.
ಬೆಂಗಳೂರು ನಗರ ಪ್ರವಾಹ ಮಾದರಿ ತಯಾರಿಕೆ” ಕಾಮಗಾರಿಯಲ್ಲಿ ಇದರಲ್ಲಿ 25 ಟೆಲಿಮೆಟ್ರಿಕ್ ಜಲ ಕೇಂದ್ರ, ನಾಲ್ಕು ಅಲ್ಟ್ರಾಸಾನಿಕ್ ನೀರಿನ ಮಟ್ಟದ ಸಂವೇಧಕಗಳನ್ನು ಸ್ಥಾಪಿಸಲಾಗಿತ್ತು. ಜೊತೆಗೆ ಬೆಂಗಳೂರಿನ ಚರಂಡಿಗಳಲ್ಲಿ ಸ್ಥಾಪಿಸಲಾಗಿದ್ದ 100 ನೀರಿನ ಸಂವೇದಕಗಳಿಂದ ಯಾವುದೇ ಮಾಹಿತಿ ಸಂಗ್ರಹವಾಗಿಲ್ಲ. ಅದೇ ರೀತಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಾಪಿಸಲಾಗಿದ್ದ ಟೆಲಿಮೆಟ್ರಿಕ್ ನೀರಿನ ಮಟ್ಟ ಸಂವೇದಕಗಳು ಕಾರ್ಯನಿವರ್ಹಿಸುತ್ತಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

