ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಜಗತ್ತಿನಲ್ಲಿ ಹೆಚ್ಚುತ್ತಿರುವ ಯುದ್ಧಗಳು ಮತ್ತು ಸಂಘರ್ಷಗಳಿಗೆ ಕೆಲವು ಶಕ್ತಿಶಾಲಿ ರಾಷ್ಟ್ರಗಳು ತಮ್ಮ ಇಚ್ಛೆಯನ್ನು ಇತರರ ಮೇಲೆ ಹೇರಲು ಎಲ್ಲಾ ಅಧಿಕಾರಗಳನ್ನು ಬಳಸುತ್ತಿರುವುದೇ ಪ್ರಮುಖ ಕಾರಣ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ‘ವಿಕ್ಷಿತ್ ಭಾರತ್ ಯಂಗ್ ಲೀಡರ್ಸ್ ಸಂವಾದ’ದಲ್ಲಿ ಮಾತನಾಡಿದ ಅವರು, ಜಾಗತಿಕ ಅಸ್ಥಿರತೆಯ ಮೂಲವನ್ನು ಭದ್ರತಾ ಕಾಳಜಿಗಳೊಂದಿಗೆ ಸಂಪರ್ಕಿಸಿದ ಅವರು, ಯಾವುದೇ ಸಂಘರ್ಷ ಮನೋರಂಜನೆಗಾಗಿ ಹುಟ್ಟುವುದಿಲ್ಲ; ಸ್ವಂತ ಭದ್ರತೆಗಾಗಿ ಇತರರನ್ನು ಅಧೀನಗೊಳಿಸಲು ಪ್ರಯತ್ನಿಸುವ ಮನೋಭಾವದಿಂದಲೇ ಯುದ್ಧಗಳು ಉಂಟಾಗುತ್ತವೆ ಎಂದರು. ರಷ್ಯಾ–ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯದ ಬಿಕ್ಕಟ್ಟು ಸೇರಿದಂತೆ ಇತ್ತೀಚಿನ ಜಾಗತಿಕ ಬೆಳವಣಿಗೆಗಳ ನಡುವೆ ಅವರ ಹೇಳಿಕೆಗಳು ಗಮನ ಸೆಳೆದಿವೆ.
ಇದನ್ನೂ ಓದಿ: FOOD | ಮಧ್ಯಾಹ್ನ ಊಟಕ್ಕೆ ಹೊಸತಾಗಿ ಏನಾದ್ರು ಮಾಡ್ಬೇಕಂತಿದ್ರೆ ದಹಿ ಆಲೂ ಟ್ರೈ ಮಾಡಿ
ಭಾರತ ಇತಿಹಾಸದಲ್ಲಿ ಯಾರ ಮೇಲೂ ದಾಳಿ ಮಾಡಿಲ್ಲವಾದರೂ, ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಸಮಯಕ್ಕೆ ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ ಹಿಂದೆ ವಿಫಲವಾಗಿದೆ ಎಂದು ಅವರು ಸ್ವಯಂವಿಮರ್ಶೆ ಮಾಡಿದರು. ದೇಶವು ಗಡಿ ಭದ್ರತೆಯಷ್ಟೇ ಅಲ್ಲದೆ ಆರ್ಥಿಕ, ಸಾಮಾಜಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ಶಕ್ತಿಯಾಗಬೇಕು ಎಂದು ಕರೆ ನೀಡಿದರು.
ಯುವಕರನ್ನು ಉದ್ದೇಶಿಸಿ ಮಾತನಾಡಿದ ದೋವಲ್, ಭೂತಕಾಲದ ಪಾಠಗಳನ್ನು ಮರೆತರೆ ಭವಿಷ್ಯದಲ್ಲಿ ದೊಡ್ಡ ಬೆಲೆ ಕಟ್ಟಬೇಕಾಗುತ್ತದೆ ಎಂದರು. ಇತಿಹಾಸದ ನೋವನ್ನು ಸ್ಮರಿಸಿ, ಭಾರತವನ್ನು ಎಲ್ಲ ಕ್ಷೇತ್ರಗಳಲ್ಲಿ ಮತ್ತೆ ಶ್ರೇಷ್ಠ ಸ್ಥಾನಕ್ಕೆ ಕೊಂಡೊಯ್ಯುವ ಹೊಣೆ ಯುವಪೀಳಿಗೆಯ ಮೇಲಿದೆ ಎಂದು ಅವರು ಹೇಳಿದರು.

