ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಳನ್ನು ಸನಾ ಪರ್ವಿನ್ (19) ಎಂದು ಗುರುತಿಸಲಾಗಿದ್ದು, ಮಡಿಕೇರಿ ಮೂಲದವಳು ಎನ್ನಲಾಗಿದೆ. ಕಾಲೇಜಿನ ಪಿಜಿ ವಸತಿಗೃಹದಲ್ಲೇ ಈ ದುರ್ಘಟನೆ ನಡೆದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅದೇ ಕಾಲೇಜಿನಲ್ಲಿ ಓದುತ್ತಿದ್ದ ಸೀನಿಯರ್ ವಿದ್ಯಾರ್ಥಿಯೊಬ್ಬ ಸನಾಗೆ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಳೆದ ಹತ್ತು ತಿಂಗಳಿನಿಂದ ಸೀನಿಯರ್ ವಿದ್ಯಾರ್ಥಿ ಅಸಭ್ಯ ಸಂದೇಶಗಳು ಕಳುಹಿಸುತ್ತಿದ್ದ ಜೊತೆಗೆ ಆಕೆಯನ್ನು ಹಿಂಬಾಲಿಸುತ್ತಿದ್ದ ಎಂದು ಪೋಷಕರು ಆರೋಪ ಮಾಡಿದ್ದಾರೆ. ಕೇರಳ ಮೂಲದ ಈ ಯುವಕ ಕಾಲೇಜು ಮತ್ತು ಪಿಜಿ ಬಳಿ ಬಂದು ಆಕೆಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
ಸನಾ ಪರ್ವಿನ್ ಈ ಕುರಿತು ತನ್ನ ಪೋಷಕರಿಗೂ ವಿಷಯ ತಿಳಿಸಿದ್ದಾಳೆ. ಆದರೆ, ನಿನ್ನೆ ರಾತ್ರಿ ಪಿಜಿಯಲ್ಲಿ ಸಹಪಾಠಿಗಳು ಹೊರಗಿದ್ದ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆ ತಿಳಿದ ತಕ್ಷಣ ಬಾಗಲೂರು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕನ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಕಿರುಕುಳದ ಹಿನ್ನೆಲೆಯೇ ಸನಾ ಆತ್ಮಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.