ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮಾರಗಟ್ಟೆ ಆಂಜನೇಯ ಸ್ವಾಮಿ ಹಾಗೂ ಕಮ್ಮಾರಗಟ್ಟೆ ಗಿರಿಯಮ್ಮನ ಪುಣ್ಯಕ್ಷೇತ್ರದ ಪೂಜಾರಿ ಗುಂಡ್ಯಪ್ಪ ಕಾರ್ಣಿಕ ನುಡಿದಿದ್ದಾರೆ. ಕಮ್ಮಾರಗಟ್ಟೆಯ ಹೊಳೆಯಾತ್ರೆಯಲ್ಲಿ ಗಣಮಗ ಸಂಪ್ರದಾಯದಂತೆ ಕಾರ್ಣಿಕ ನುಡಿಯಲಾಯಿತು. ವಿವಿಧ ಗ್ರಾಮಗಳ ಸುಮಾರು ಹತ್ತು ದೇವರುಗಳು ಹೊಳೆಯಾತ್ರೆಯಲ್ಲಿ ಭಾಗಿಯಾಗಿದ್ದವು.
‘ಶಿಖರದ ತುದಿಗೆ ಘಟಸರ್ಪ ಅಡೀತ್ರಲೆ, ಭೂಲೋಕದ ಮುತ್ತು ಗಗನಕೇರೀತ್ರಲೇ” ಎಂಬ ಕಾರ್ಣಿಕ ವಾಣಿಯನ್ನು ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಬಹುದು, ಏನು ಬೇಕಾದರೂ ಆಗಬಹುದು ಎಂಬರ್ಥದಲ್ಲಿ ಭಕ್ತರು ವಿಶ್ಲೇಷಿಸುತ್ತಿದ್ದಾರೆ.
ಜತೆಗೆ, ಬೆಳೆ ಹಾಗೂ ದಿನಸಿ ಬೆಲೆ ಹೆಚ್ಚಾಗಲಿದೆ ಎಂಬ ಸೂಚನೆ ಇದು ಎನ್ನಲಾಗಿದೆ. ‘ಭೂಲೋಕದ ಮುತ್ತು ಗಗನಕೇರೀತ್ರಲೇ’ ಎಂಬುದನ್ನು, ಏನೇ ಆದರೂ ದೇವರಿದ್ದಾನೆ ಭಯಪಡಬೇಡಿ ಎಂದು ಅಭಯ ನೀಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.