ಹೊಸದಿಗಂತ ವರದಿ ಹಾವೇರಿ:
ರಾಜ್ಯಕ್ಕೆ ದಲಿತ ಸಮುದಾಯದ ಮುಖ್ಯಮಂತ್ರಿ ಆಗಬೇಕು ಎಂಬುದು ನಮ್ಮ ಅಪೇಕ್ಷೆ. ಸಿದ್ದರಾಮಯ್ಯನವರು ಮುಂದುವರೆದರೆ ನಮ್ಮದೇನೂ ಅಭ್ಯಂತರವಿಲ್ಲ, ಒಂದು ವೇಳೆ ಮುಂದುವರಿಯದೇ ಇದ್ದರೆ ದಲಿತರನ್ನು ಸಿಎಂ ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ನಾವು ಒತ್ತಾಯ ಮಾಡುತ್ತೇವೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸತೀಶ ಜಾರಕಿಹೊಳಿ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಅವರಿಗೆ ಆ ಸಾಮರ್ಥ್ಯ,ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗುವ ಎಬಿಲಿಟಿ ಇದೆ. ಹೀಗಾಗಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.
2028ಕ್ಕೆ ಸಿಎಂ ಆಗುವುದು ನಮ್ಮ ಗುರಿ ಎಂಬ ಸತೀಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಅವರು ಹಾಗೆ ಹೇಳಿದ್ದು ಸರಿ ಇದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೂ ಸತೀಶ ಜಾರಕಿಹೊಳಿ ಅವರಿಗೆ ಅವಕಾಶ ಮಾಡಿ ಕೊಡಲಿ, ಒಟ್ಟಾರೆ ದಲಿತ ನಾಯಕರಿಗೆ ಸಿಎಂ ಹುದ್ದೆ ಸಿಗಲಿ ಎಂದು ನಮ್ಮದು ಮೊದಲಿನಿಂದಲೂ ಒತ್ತಾಯ ಇದೆ. ಇನ್ನು ರಮೇಶ್ ಕತ್ತಿ ಅವಹೇಳನಕಾರಿಯಾಗಿ ನಮ್ಮ ಸಮಾಜದ ವಿರುದ್ಧ ಮಾತಾಡಿದ್ದರು. ಈ ಕುರಿತು ಸರ್ಕಾರ ಕಾನೂನು ರೀತಿ ಕ್ರಮ ಕೈಗೊಳ್ಳಲಿ, ಸರ್ಕಾರ ಏನು ಮಾಡುತ್ತೋ ಕಾಯುತ್ತೇವೆ, ಬಳಿಕ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದರು.

