February 27, 2026
Friday, February 27, 2026
spot_img

ಭಕ್ತಿಯ ಮೆರುಗು , ಸಂಪ್ರದಾಯದ ಸೊಬಗು ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಮುಹೂರ್ತ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಸಾಂಸ್ಕೃತಿಕ ಅಸ್ಮಿತೆಯಂತಿರುವ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿದೆ. ನಗರದ ಅತಿ ಪುರಾತನ ಮತ್ತು ಸೌಹಾರ್ದತೆಯ ಸಂಕೇತವಾದ ಈ ಮಹೋತ್ಸವವು ಈ ಬಾರಿ ಏಪ್ರಿಲ್ 1ರ ಮಧ್ಯರಾತ್ರಿ ಸಂಭವಿಸಲಿದೆ. ಇದರೊಂದಿಗೆ ಸಿಲಿಕಾನ್ ಸಿಟಿಯಲ್ಲಿ ಧಾರ್ಮಿಕ ಸಂಭ್ರಮದ ದಿನಗಣನೆ ಅಧಿಕೃತವಾಗಿ ಆರಂಭವಾದಂತಾಗಿದೆ.

ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯು 11 ದಿನಗಳ ಈ ಸುದೀರ್ಘ ಉತ್ಸವದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ:

ಮಾರ್ಚ್ 24: ಧ್ವಜಾರೋಹಣದ ಮೂಲಕ ಅಧಿಕೃತ ಚಾಲನೆ.

ಮಾರ್ಚ್ 30: ಮುಂಜಾನೆ 4 ಗಂಟೆಗೆ ಪವಿತ್ರ ‘ಹಸಿಕರಗ’ ಆಚರಣೆ. (ದ್ರೌಪದಿ ದೇವಿ ಧರೆಗಿಳಿಯುವ ಸುದಿನ).

ಏಪ್ರಿಲ್ 1: ಮಧ್ಯರಾತ್ರಿ ಜಗಮಗಿಸುವ ಬೆಳಕಿನಲ್ಲಿ ಸಾಂಪ್ರದಾಯಿಕ ‘ಬೆಂಗಳೂರು ಕರಗ ಶಕ್ತ್ಯೋತ್ಸವ’.

ವಿಶೇಷವೆಂದರೆ, ಕಳೆದ ವರ್ಷ ಯಶಸ್ವಿಯಾಗಿ ಕರಗ ಹೊತ್ತಿದ್ದ ಅರ್ಚಕರಾದ ಎ. ಜ್ಞಾನೇಂದ್ರಸ್ವಾಮಿ ಅವರು ಈ ಬಾರಿಯೂ ಸತತ 16ನೇ ಬಾರಿಗೆ ಹೂವಿನ ಕರಗವನ್ನು ಹೊತ್ತು ಸಾಗಲಿದ್ದಾರೆ.

ಶತಮಾನಗಳ ಇತಿಹಾಸವಿರುವ ಈ ಹಬ್ಬವು ಕೇವಲ ತಿಗಳ ಸಮುದಾಯಕ್ಕೆ ಸೀಮಿತವಾಗದೆ, ಸರ್ವಧರ್ಮೀಯರನ್ನೂ ಒಗ್ಗೂಡಿಸುವ ಶಕ್ತಿಯಾಗಿದೆ. ಚೈತ್ರ ಪೌರ್ಣಮಿಯಂದು ದ್ರೌಪದಿ ದೇವಿಯು ಶಕ್ತಿಯ ರೂಪದಲ್ಲಿ ಭೂಮಿಗೆ ಬಂದು ಭಕ್ತರ ಕಷ್ಟಗಳನ್ನು ನೀಗಿಸುತ್ತಾಳೆ ಎಂಬ ಗಾಢವಾದ ನಂಬಿಕೆ ಭಕ್ತಾದಿಗಳಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !