ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದೇಶದ ಬೆಳವಣಿಗೆ ಜತೆಗೆ ಹಿಂದು ಧರ್ಮವನ್ನು ಥಳುಕು ಹಾಕುವುದು ಸರಿಯಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
23ನೇ ಆವೃತ್ತಿಯ ಹಿಂದೂಸ್ಥಾನ್ ಟೈಮ್ಸ್ ಲೀಡರ್‌ಶಿಪ್ ಸಮ್ಮಿಟ್‌ನಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಹಿಂದು ಧರ್ಮವನ್ನು, ನಂಬಿಕೆಯನ್ನು ದೂಷಿಸುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಹೇಳಿದರು.
ಭಾರತದ ನಿಧಾನಗತಿಯ ಬೆಳವಣಿಗೆಯನ್ನು ಹಿಂದು ಬೆಳವಣಿಗೆಯ ದರ ಎಂದು ಕರೆಯುವ ಮೂಲಕ ಸನಾತನ ಧರ್ಮದ ಜೀವನ ವಿಧಾನವನ್ನು ಅಪಖ್ಯಾತಿಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ಹೇಳಿದರು.
ನಾವು 21ನೇ ಶತಮಾನದ ಒಂದು ಭಾಗ ಕಳೆದುಹೋದ ಕಾಲಘಟ್ಟದಲ್ಲಿದ್ದೇವೆ. ಜಗತ್ತು ಅದೆಷ್ಟೋ ಏರಿಳಿತಗಳನ್ನು ಕಂಡಿದೆ – ಆರ್ಥಿಕ ಬಿಕ್ಕಟ್ಟು, ಜಾಗತಿಕ ಸಾಂಕ್ರಾಮಿಕ ರೋಗ ಇತ್ಯಾದಿ. ಈ ಸನ್ನಿವೇಶಗಳು ಒಂದಲ್ಲ ಒಂದು ರೀತಿಯಲ್ಲಿ ಜಗತ್ತಿಗೆ ಸವಾಲು ಒಡ್ಡಿವೆ. ಇಂದು ಜಗತ್ತು ಅನಿಶ್ಚಿತತೆಯ ಗೂಡಾಗಿದೆ. ಆದರೆ ಇದರ ಮಧ್ಯೆ ಭಾರತವು ವಿಭಿನ್ನವಾಗಿ ದೃಢವಾಗಿ ನಿಂತಿದೆ. ನಮ್ಮ ದೇಶ ಆತ್ಮವಿಶ್ವಾಸದಲ್ಲಿದೆ ಎಂದು ಮೋದಿ ಬಣ್ಣಿಸಿದರು.
ಜಗತ್ತು ನಿಧಾನಗತಿಯ ಬಗ್ಗೆ ಮಾತನಾಡುವಾಗ, ಭಾರತವು ಬೆಳವಣಿಗೆಯ ಕಥೆಗಳನ್ನು ಹೇಳುತ್ತುದೆ. ಜಗತ್ತು ಬಿಕ್ಕಟ್ಟನ್ನು ಎದುರಿಸುವಾಗೆಲ್ಲ ಭಾರತವು ನಂಬಿಕೆಯ ಸ್ತಂಭವಾಗಿ ಕಾರ್ಯ ನಿರ್ವಹಿಸುತ್ತದೆʼ ಎಂದು ವಿವರಿಸಿದರು.
ಇದೇ ವೇಲೆ ನರೇಂದ್ರ ಮೋದಿ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಸರ್ಕಾರ ಕೆಲಸ ಮಾಡುವ ರೀತಿಯನ್ನು ಬದಲಾಯಿಸಿದೆ. ಇಲ್ಲಿನ ಪ್ರಜೆಗಳ ಪೌರತ್ವವನ್ನು ನಿರ್ಧರಿಸಲು ಅವರ ಸ್ವದೃಢಿಕೃತ ದಾಖಲೆ ಸಾಕುʼ ಎಂದು ಹೇಳಿದರು.
ಒಂದು ಸರ್ಕಾರ ತನ್ನ ನಾಗರಿಕರ ಮೇಲೆ ನಂಬಿಕೆ ಇಡುವುದು ಮುಖ್ಯ . ದೇಶವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಹೊರ ತರಬೇಕು. ಈ ಕಾರ್ಯ ಪ್ರತಿಯೊಂದು ಮೂಲೆಯಲ್ಲೂ ಆಗಬೇಕು. ಮುಂದಿನ 10 ವರ್ಷಗಳ ಕಾಲ ನಾಗರಿಕರನ್ನು ಆ ದೂರದೃಷ್ಟಿಯೊಂದಿಗೆ ಮುನ್ನಡೆಸಲು ನಾನು ಬಯಸುತ್ತೇನೆ ಎಂದು ಮೋದಿ ತಿಳಿಸಿದರು.

