ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪತ್ನಿಗೆ ಅನಸ್ತೇಶಿಯಾ ನೀಡಿ ಹತ್ಯೆ ಮಾಡಿ, ಅದನ್ನು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ವೈದ್ಯನನ್ನು ಕೊನೆಗೂ ಮಾರತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಡಾ. ಮಹೇಂದ್ರ ರೆಡ್ಡಿ ಎಂದು ಗುರುತಿಸಲಾಗಿದೆ. ಆರು ತಿಂಗಳ ಹಿಂದೆ ನಡೆದಿದ್ದ ಈ ಕೃತ್ಯದ ಹಿಂದಿನ ಸತ್ಯಾಂಶ ಇದೀಗ ಬಯಲಾಗಿದೆ.
ಘಟನೆಯ ವಿವರ
ಕೊಲೆಯಾದ ಮಹಿಳೆ ಡಾ. ಕೃತಿಕಾ ರೆಡ್ಡಿ (ಡರ್ಮೆಟಾಲಜಿಸ್ಟ್) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿ ಡಾ. ಮಹೇಂದ್ರ ರೆಡ್ಡಿ ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದರು. ಈ ದಂಪತಿಗೆ 2024ರ ಮೇ 26ರಂದು ವಿವಾಹವಾಗಿತ್ತು.
ಕೃತಿಕಾ ಅವರಿಗೆ ಅಜೀರ್ಣ, ಗ್ಯಾಸ್ಟ್ರಿಕ್ ಮತ್ತು ಲೋ ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿದ್ದವು. ಮದುವೆಗೂ ಮುನ್ನ ಈ ವಿಚಾರವನ್ನು ಕೃತಿಕಾ ಮನೆಯವರು ಮಹೇಂದ್ರ ರೆಡ್ಡಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ವಿವಾಹದ ನಂತರ ವಿಷಯ ತಿಳಿದ ಮಹೇಂದ್ರ, ನಿತ್ಯದ ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ.
ಕೊಲೆ ಮತ್ತು ಸಂಚು ಬಯಲು
ಕೃತಿಕಾ ಅವರು ಹುಷಾರಿಲ್ಲದೆ ತಮ್ಮ ತವರು ಮನೆಯಲ್ಲಿ ಮಲಗಿದ್ದಾಗ, ಆರೋಪಿ ಮಹೇಂದ್ರ ರೆಡ್ಡಿ ಐವಿ ಇಂಜೆಕ್ಷನ್ ಮೂಲಕ ಕೆಲ ಔಷಧಗಳನ್ನು ನೀಡಿದ್ದ. ಎರಡು ದಿನಗಳ ಕಾಲ ನಿರಂತರವಾಗಿ ಈ ಮೆಡಿಸಿನ್ ನೀಡಿದ ನಂತರ, ಈ ವರ್ಷದ ಏಪ್ರಿಲ್ 23 ರಂದು ಕೃತಿಕಾ ಅವರು ಜ್ಞಾನ ತಪ್ಪಿದ್ದರು. ಕೂಡಲೇ ಆಕೆಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಆಸ್ಪತ್ರೆಯಿಂದ ಡೆತ್ ಮೆಮೊ ಬಂದ ಹಿನ್ನೆಲೆಯಲ್ಲಿ ಪೊಲೀಸರು ಯುಡಿಆರ್ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹದ ಸ್ಯಾಂಪಲ್ ಅನ್ನು ಎಫ್ಎಸ್ಎಲ್ ಗೆ ಕಳುಹಿಸಲಾಗಿತ್ತು. ಎಫ್‌ಎಸ್‌ಎಲ್ ವರದಿಯಲ್ಲಿ ಅಂತಿಮವಾಗಿ ಸಾವಿಗೆ ಕಾರಣವಾಗಿದ್ದು ಅನಸ್ತೇಶಿಯಾ ಅಂಶಗಳು ಎಂದು ತಿಳಿದುಬಂದಿದೆ.
ವರದಿ ಬಂದ ನಂತರ ಇದು ಸಹಜ ಸಾವಲ್ಲ, ಕೊಲೆ ಎಂಬುದು ಖಚಿತವಾಯಿತು. ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಆರೋಪಿ ಮಹೇಂದ್ರ ರೆಡ್ಡಿ ಮಣಿಪಾಲದಲ್ಲಿ ಪತ್ತೆಯಾಗಿದ್ದು, ಆತನನ್ನು ಬಂಧಿಸಲಾಗಿದೆ. ಸದ್ಯ ಪೊಲೀಸರು ಆತನನ್ನು ಬೆಂಗಳೂರಿಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.