Friday, January 9, 2026

ಮಹಿಳೆಯೇ ಸ್ವತಃ ವಿವಸ್ತ್ರಗೊಂಡಿದ್ದಾರೆ: ಪೊಲೀಸರ ಮೇಲಿನ ಆರೋಪ ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಹಾವೇರಿ:

ಹುಬ್ಬಳ್ಳಿಯಲ್ಲಿ ಪೊಲೀಸರು ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಳ್ಳಿಹಾಕಿದ್ದಾರೆ. ಈ ಘಟನೆಯಲ್ಲಿ ಪೊಲೀಸರ ಯಾವುದೇ ತಪ್ಪಿಲ್ಲ, ಬದಲಾಗಿ ಬಂಧಿತ ಮಹಿಳೆಯೇ ಕಾನೂನು ಉಲ್ಲಂಘಿಸಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸುಜಾತ ಹಂಡೆ ಎಂಬ ಮಹಿಳೆಯನ್ನು ಬಂಧಿಸಲು ಹೋದ ಸಂದರ್ಭದಲ್ಲಿ ನಡೆದ ನೈಜ ಘಟನೆಯನ್ನು ವಿವರಿಸಿದರು. “ಬಂಧನದ ವೇಳೆ ಮಹಿಳೆಯೇ ಸ್ವತಃ ವಿವಸ್ತ್ರಗೊಂಡು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಮಹಿಳಾ ಸಿಬ್ಬಂದಿಗೆ ಕಚ್ಚಿ ಗಾಯಗೊಳಿಸಿದ್ದಾರೆ,” ಎಂದು ಸಿಎಂ ಮಾಹಿತಿ ನೀಡಿದರು.

ಕಾರ್ಯಾಚರಣೆಯ ಸಮಯದಲ್ಲಿ ಸ್ಥಳದಲ್ಲಿ 10ಕ್ಕೂ ಹೆಚ್ಚು ಮಹಿಳಾ ಪೊಲೀಸರಿದ್ದರು. ಹೀಗಾಗಿ ಪುರುಷ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿದರು ಎಂಬ ವಾದದಲ್ಲಿ ಸತ್ಯಾಂಶವಿಲ್ಲ.

“ಯಾರೇ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ವ್ಯವಸ್ಥೆಯ ವಿರುದ್ಧ ವರ್ತಿಸುವವರ ಮೇಲೆ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸಿಎಂ ಎಚ್ಚರಿಸಿದರು.

ಹುಬ್ಬಳ್ಳಿಯ ಈ ಪ್ರಕರಣವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಸ್ವತಃ ಮುಖ್ಯಮಂತ್ರಿಗಳೇ ಘಟನೆಯ ವಿವರ ನೀಡಿ ಪೊಲೀಸರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

error: Content is protected !!