March 16, 2026
Monday, March 16, 2026
spot_img

ಬನ್ನೇರುಘಟ್ಟಕ್ಕೆ ಬಂತು ‘ಝೀಬ್ರಾ’ ಜೋಡಿ: ಕೋಕಿಲ-ಕಾವೇರಿ ಮಡಿಲಲ್ಲಿ ಪುಟ್ಟ ಕಂದಮ್ಮಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಪ್ರವಾಸಿಗರ ನೆಚ್ಚಿನ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಈಗ ಸಂಭ್ರಮವೋ ಸಂಭ್ರಮ. ಉದ್ಯಾನವನದ ಝೀಬ್ರಾಗಳ ಕುಟುಂಬಕ್ಕೆ ಇಬ್ಬರು ಹೊಸ ಸದಸ್ಯರ ಸೇರ್ಪಡೆಯಾಗಿದ್ದು, ಪ್ರಾಣಿ ಪ್ರಿಯರಲ್ಲಿ ಹರ್ಷ ಮೂಡಿಸಿದೆ.

ಉದ್ಯಾನವನದಲ್ಲಿದ್ದ ‘ಕೋಕಿಲ’ ಮತ್ತು ‘ಕಾವೇರಿ’ ಎಂಬ ಎರಡು ಜೀಬ್ರಾಗಳು ತಲಾ ಒಂದು ಹೆಣ್ಣು ಮರಿಗೆ ಜನ್ಮ ನೀಡಿವೆ. ಈ ಹೊಸ ಅತಿಥಿಗಳ ಆಗಮನದೊಂದಿಗೆ ಬನ್ನೇರುಘಟ್ಟದಲ್ಲಿರುವ ಒಟ್ಟು ಝೀಬ್ರಾಗಳ ಸಂಖ್ಯೆ ಈಗ 9ಕ್ಕೆ ಏರಿಕೆಯಾಗಿದೆ. ವಿಶೇಷವೆಂದರೆ, ಇಲ್ಲಿ ಸದ್ಯ ಹೆಣ್ಣು ಜೀಬ್ರಾಗಳ ಸಂಖ್ಯೆಯೇ ಹೆಚ್ಚಿದೆ.

ಹೊಸದಾಗಿ ಜನಿಸಿದ ಮರಿಗಳು ಮತ್ತು ತಾಯಿ ಜೀಬ್ರಾಗಳು ಸಂಪೂರ್ಣ ಆರೋಗ್ಯವಾಗಿದ್ದು, ಮೃಗಾಲಯದ ಸಿಬ್ಬಂದಿ ಅವುಗಳ ಮೇಲೆ ನಿರಂತರ ನಿಗಾ ಇರಿಸಿದ್ದಾರೆ. ತಾಯಿ ಜೀಬ್ರಾಗಳ ಜೊತೆಗೆ ಮರಿಗಳು ಸುರಕ್ಷಿತವಾಗಿವೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಉದ್ಯಾನವನದ ಕಾರ್ಯನಿರ್ವಾಹಕ ಅಧಿಕಾರಿ ಸೂರ್ಯಸೇನ್ ಅವರು, “ಮುಂದಿನ ದಿನಗಳಲ್ಲಿ ಪ್ರಾಣಿ ವಿನಿಮಯ ಯೋಜನೆಯಡಿ ಕೆಲವು ಝೀಬ್ರಾಗಳನ್ನು ಇತರ ಮೃಗಾಲಯಗಳಿಗೆ ನೀಡಿ, ಅವುಗಳಿಗೆ ಬದಲಾಗಿ ಅಪರೂಪದ ಇತರ ಪ್ರಾಣಿಗಳನ್ನು ತರುವ ಬಗ್ಗೆ ಆಲೋಚನೆ ನಡೆಸಲಾಗುತ್ತಿದೆ,” ಎಂದು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !