Tuesday, September 30, 2025

ರಂಗಭೂಮಿ ದಿಗ್ಗಜ ಯಶವಂತ ಸರದೇಶಪಾಂಡೆ ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ರಂಗಭೂಮಿ ಕಲಾವಿದ ಹಾಗೂ ನಾಟಕಕಾರ ಯಶವಂತ ಸರದೇಶಪಾಂಡೆ ಅವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಬೆಳಿಗ್ಗೆ 10 ಗಂಟೆ ಸುಮಾರಿಗೆ ಹೃದಯಾಘಾತ ಉಂಟಾದ ಅವರನ್ನು ತಕ್ಷಣವೇ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಯಶವಂತ ಸರದೇಶಪಾಂಡೆ ಅವರು ಹಾಸ್ಯ ನಾಟಕಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿಕೊಂಡ ಕಲಾವಿದರಾಗಿದ್ದರು. ನಿರ್ದೇಶಕ, ನಟ, ನಾಟಕಕಾರರಾಗಿ ಜನಪ್ರಿಯತೆ ಪಡೆದ ಅವರು ದೇಶ-ವಿದೇಶಗಳಲ್ಲಿ ತಮ್ಮ ನಾಟಕಗಳನ್ನು ಪ್ರದರ್ಶಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು. ವಿಶೇಷವಾಗಿ ‘ಆಲ್ ದಿ ಬೆಸ್ಟ್’ ನಾಟಕ ಭಾರೀ ಯಶಸ್ಸು ಕಂಡಿತ್ತು. ಜೊತೆಗೆ ‘ರಾಮ ಶ್ಯಾಮ ಭಾಮಾ’ ಸೇರಿದಂತೆ ಹಲವಾರು ಚಿತ್ರಗಳು ಮತ್ತು ಧಾರಾವಾಹಿಗಳಲ್ಲಿಯೂ ಅವರು ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದಿದ್ದರು.

ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸುತ್ತಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಾಮಾಜಿಕ ಜಾಲತಾಣದ ಮೂಲಕ ಶೋಕ ವ್ಯಕ್ತಪಡಿಸಿದ್ದಾರೆ. “ನಮ್ಮ ಹುಬ್ಬಳ್ಳಿಯ ಹೆಮ್ಮೆಯ ಕಲಾವಿದ ಯಶವಂತ ಸರದೇಶಪಾಂಡೆ ಅವರ ಅಗಲಿಕೆ ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟ” ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹುಬ್ಬಳ್ಳಿಯ ಲಿಂಗರಾಜನಗರ ದಸರಾ ಉದ್ಘಾಟನೆಗೆ ಹಾಜರಾಗಿ ಜನರೊಂದಿಗೆ ಸಂತೋಷ ಹಂಚಿಕೊಂಡಿದ್ದ ಯಶವಂತ ಅವರ ಆಕಸ್ಮಿಕ ಅಗಲಿಕೆ ಅಭಿಮಾನಿಗಳ ಮನದಲ್ಲಿ ಆಘಾತ ಮೂಡಿಸಿದೆ.