ಪ್ರವಾಸವನ್ನು ಇಷ್ಟಪಡುವವರಿಗೆ ವಿಮಾನಯಾನವೇ ಅತ್ಯುತ್ತಮ ಸಾರಿಗೆ ಆಯ್ಕೆ. ಇದು ಸಮಯವನ್ನು ಉಳಿಸುವುದರ ಜೊತೆಗೆ ಶ್ರಮವನ್ನೂ ಕಡಿಮೆ ಮಾಡುತ್ತದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರ ಅಂತಾರಾಷ್ಟ್ರೀಯ ವಿಮಾನಗಳ ಮೂಲಕ ಪ್ರವಾಸಿಗರು ಅನೇಕ ದೇಶಗಳಿಗೆ ತಲುಪಬಹುದು. ಮಧ್ಯದಲ್ಲಿ ಏರ್‌ಕನೆಕ್ಟ್ ಅಥವಾ ಟ್ರಾನ್ಸ್ಫರ್ ಬೇಕಾಗದ ಕಾರಣ ಪ್ರಯಾಣ ಸುಲಭವಾಗುತ್ತದೆ, ವೆಚ್ಚ ಕಡಿಮೆಯಾಗುತ್ತದೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಭವವನ್ನು ನೀಡುತ್ತದೆ.
ಬ್ಯಾಂಕಾಕ್ – ಥೈಲ್ಯಾಂಡ್ ಪ್ರವಾಸ
ಥೈಲ್ಯಾಂಡ್‌ನ ಬ್ಯಾಂಕಾಕ್ ಪ್ರವಾಸಿಗರಿಗೆ ಅತ್ಯಂತ ಜನಪ್ರಿಯ ತಾಣ. ಬೆಂಗಳೂರಿನಿಂದ ಕೇವಲ ನಾಲ್ಕು ಗಂಟೆಯಲ್ಲೇ ನೇರವಾಗಿ ತಲುಪಬಹುದು. ಥಾಯ್ ಏರ್‌ವೇಸ್ ಮತ್ತು ಇಂಡಿಗೊ ಸಂಸ್ಥೆಗಳು ಈ ಸೇವೆಗಳನ್ನು ನೀಡುತ್ತವೆ. ಇಲ್ಲಿ ನೈಟ್ ಲೈಫ್, ದೇವಾಲಯಗಳು ಹಾಗೂ ರುಚಿಕರವಾದ ಥಾಯ್ ಆಹಾರ ಪ್ರವಾಸಿಗರನ್ನು ಸೆಳೆಯುತ್ತವೆ.

ಮಾಲೆ – ಮಾಲ್ಡೀವ್ಸ್‌ನ ಹನಿಮೂನ್ ಸ್ವರ್ಗ
ಮಾಲ್ಡೀವ್ಸ್‌ನ ಮಾಲೆ ಪ್ರವಾಸಿಗರಿಗೆ ಕನಸಿನ ತಾಣ. ಬೆಂಗಳೂರಿನಿಂದ ಕೇವಲ ಎರಡು ಗಂಟೆಗಳಲ್ಲೇ ನೇರ ವಿಮಾನ ಸೇವೆಯಿದೆ. ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಯಾನ ಸಂಸ್ಥೆಗಳು ಈ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತವೆ. ನೀಲಿ ಸಮುದ್ರ, ರೆಸಾರ್ಟ್ಸ್ ಮತ್ತು ಜಲಕ್ರೀಡೆಗಳು ಮಾಲೆಯನ್ನು ವಿಶ್ವದ ಪ್ರಮುಖ ಹನಿಮೂನ್ ತಾಣವನ್ನಾಗಿ ಮಾಡಿವೆ.

ಮಸ್ಕತ್ – ಸಾಂಸ್ಕೃತಿಕ ಶ್ರೀಮಂತಿಕೆ
ಒಮಾನ್‌ನ ಮಸ್ಕತ್ ಬೆಂಗಳೂರಿನಿಂದ ನೇರ ವಿಮಾನ ಸೇವೆಯಿಂದ ತಲುಪಬಹುದಾದ ತಾಣ. ಓಮಾನ್ ಏರ್ ಮತ್ತು ಇಂಡಿಗೊ ವಿಮಾನ ಸಂಸ್ಥೆಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ. ಮಸ್ಕತ್ ತನ್ನ ಮಸೀದಿಗಳು, ಮರುಭೂಮಿ ದೃಶ್ಯಗಳು ಮತ್ತು ಐತಿಹಾಸಿಕ ಶ್ರೀಮಂತಿಕೆಗೆ ಹೆಸರುವಾಸಿ.

ಪ್ಯಾರಿಸ್ – ಪ್ರೇಮಿಗಳ ನಗರ
ಫ್ರಾನ್ಸ್‌ನ ಪ್ಯಾರಿಸ್, ಪ್ರಣಯ ತಾಣವಾಗಿ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಬೆಂಗಳೂರಿನಿಂದ ನೇರವಾಗಿ ಪ್ಯಾರಿಸ್‌ಗೆ ಹಾರಬಹುದಾಗಿದೆ. ಐಫೆಲ್ ಟವರ್ ಹಾಗೂ ಪ್ಯಾರಿಸ್ ಕಾಫೆಗಳಲ್ಲಿ ಕಳೆಯುವ ಸಮಯ ಪ್ರವಾಸಿಗರಿಗೆ ಮರೆಯಲಾಗದ ಅನುಭವ ನೀಡುತ್ತದೆ.

ಲಂಡನ್ – ಸಂಸ್ಕೃತಿ ಮತ್ತು ಶಾಪಿಂಗ್
ಬ್ರಿಟಿಷ್ ಏರ್ವೇಸ್, ಏರ್ ಇಂಡಿಯಾ ಹಾಗೂ ವರ್ಜಿನ್ ಅಟ್ಲಾಂಟಿಕ್ ಸಂಸ್ಥೆಗಳ ನೇರ ವಿಮಾನ ಸೇವೆಯಿಂದ ಬೆಂಗಳೂರಿನಿಂದ ಲಂಡನ್‌ಗೆ ಸುಲಭವಾಗಿ ತಲುಪಬಹುದು. ಇಲ್ಲಿ ರಾಜಮನೆತನದ ಆಕರ್ಷಣೆ, ಆಕ್ಸ್‌ಫರ್ಡ್ ಸ್ಟ್ರೀಟ್ ಶಾಪಿಂಗ್ ಹಾಗೂ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳು ಪ್ರವಾಸಿಗರನ್ನು ರಂಜಿಸುತ್ತವೆ.

ಸಿಡ್ನಿ – ಆಸ್ಟ್ರೇಲಿಯಾದ ಅದ್ಭುತ ನಗರ
ಕ್ವಾಂಟಾಸ್ ಸಂಸ್ಥೆ ಸಿಡ್ನಿಗೆ ನೇರ ವಿಮಾನ ಸೇವೆಗಳನ್ನು ನೀಡುತ್ತದೆ. ಸುಮಾರು 11 ಗಂಟೆಗಳ ಪ್ರಯಾಣದ ಬಳಿಕ ಪ್ರವಾಸಿಗರು ಆಸ್ಟ್ರೇಲಿಯಾದ ಪ್ರಸಿದ್ಧ ಒಪೇರಾ ಹೌಸ್ ಹಾಗೂ ಬೋಂಡಿ ಬೀಚ್ ಆಕರ್ಷಣೆಗಳನ್ನು ವೀಕ್ಷಿಸಬಹುದು.

ಇತರೆ ತಾಣಗಳು
ಬೆಂಗಳೂರಿನಿಂದ ನೇರವಾಗಿ ತಲುಪಬಹುದಾದ ಇತರೆ ಪ್ರಮುಖ ತಾಣಗಳಲ್ಲಿ ಜರ್ಮನಿಯ ಫ್ರಾಂಕ್‌ಫರ್ಟ್ ಹಾಗೂ ಮ್ಯೂನಿಕ್, ಮಲೇಷ್ಯಾದ ಲಂಗ್ಕಾವಿ ಹಾಗೂ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೊ ಸೇರಿವೆ.