Monday, December 22, 2025

‘ಕಾಡಲ್ಲಿ ತುಂಬಾನೇ ಪ್ರಾಣಿಗಳಿರುತ್ತೆ, ಆದ್ರೆ ರಾಜ ಸಿಂಹನೇ’: ಸುದೀಪ್‌ಗೆ ಟಾಂಗ್ ಕೊಟ್ಟ ನಟ ಧನ್ವೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ನಡೆದ ಪ್ರೀ-ರಿಲೀಸ್ ಕಾರ್ಯಕ್ರಮವೇ ಇದೀಗ ಚರ್ಚೆಯ ಕೇಂದ್ರಬಿಂದುವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ತಮ್ಮ ವಿರೋಧಿಗಳ ಬಗ್ಗೆ ಪರೋಕ್ಷವಾಗಿ ತೀಕ್ಷ್ಣ ಮಾತುಗಳನ್ನಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರತಿಕ್ರಿಯೆಗೆ ಕಾರಣವಾಗಿದೆ.

ಸುದೀಪ್ ಹೇಳಿಕೆಗೆ ದರ್ಶನ್ ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಅದಕ್ಕೆ ತಿರುಗೇಟು ಎಂಬಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತಿನ ಮೂಲಕ ಪ್ರತಿಕ್ರಿಯಿಸಿದ್ದರು. ಈ ಬೆಳವಣಿಗೆಯ ನಡುವೆಯೇ ದರ್ಶನ್ ಆಪ್ತ ಧನ್ವೀರ್ ಗೌಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ದರ್ಶನ್ ಜೊತೆಯ ಫೋಟೋ ಹಂಚಿಕೊಂಡು, ತಮಿಳು ನಟ ವಿಜಯ್ ಅವರ ಪ್ರಸಿದ್ಧ ಡೈಲಾಗ್ ಅನ್ನು ಉಲ್ಲೇಖಿಸಿ ಪರೋಕ್ಷ ಸಂದೇಶ ರವಾನಿಸಿದ್ದಾರೆ. ‘ಕಾಡಲ್ಲಿ ಹಲವಾರು ಪ್ರಾಣಿಗಳಿರುತ್ತವೆ, ಆದರೆ ಸಿಂಹನೇ ರಾಜ’ ಎಂಬ ಸಾಲು ಅಭಿಮಾನಿಗಳ ಗಮನ ಸೆಳೆದಿದೆ.

ಧನ್ವೀರ್, ದರ್ಶನ್ ಕುಟುಂಬದೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಯಾಗಿದ್ದು, ದರ್ಶನ್ ಸಂಕಷ್ಟದ ಸಮಯದಲ್ಲೂ ಅವರ ಕುಟುಂಬದ ಜೊತೆಗೆ ನಿಂತಿದ್ದರು. ಹೀಗಾಗಿ ಈ ಪೋಸ್ಟ್‌ನ್ನು ಅಭಿಮಾನಿಗಳು ಸುದೀಪ್‌ಗೆ ತಿರುಗೇಟು ಎಂದೇ ಹೇಳುತ್ತಿದ್ದಾರೆ.

error: Content is protected !!