March 24, 2026
Tuesday, March 24, 2026
spot_img

ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಸಚಿವ ಡಾ. ಪರಮೇಶ್ವರ್

ಹೊಸದಿಗಂತ ವರದಿ, ತುಮಕೂರು:

ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಗಲಾಟೆಗೆ ಯಾರು ಕಾರಣಕರ್ತರಾಗಿದ್ದಾರೋ, ತಪ್ಪಿತಸ್ಥರಿದ್ದಾರೋ ಅವರನ್ನು ಯಾವುದೇ ಕಾರಣಕ್ಕೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರು ಗಲಾಟೆಗೆ ಹಿಂದೂಗಳಿರಬಹುದು ಅಥವಾ ಮುಸಲ್ಮಾನರಾಗಿರಬಹುದು ಯಾರೇ ಕಾರಣರಾಗಿದ್ದರೂ ಅವರನ್ನು ರಕ್ಷಣೆ ಮಾಡಲು ಹೋಗುವುದಿಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಮುಲಾಜಿಲ್ಲದೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಈ ವಿಚಾರದಲ್ಲಿ ಪೊಲೀಸರ ಭದ್ರತಾ ವೈಫಲ್ಯ ಎನ್ನುವುದು ಸರಿಯಲ್ಲ. ಪೊಲೀಸರು ಕಲ್ಲು ಹೊಡೆಯಿರಿ ಎಂದು ಹೇಳಿದ್ದರಾ, ಮೊದಲು ಯಾರು ತಪ್ಪು ಮಾಡಿದ್ದಾರೋ ಆ ಬಗ್ಗೆ ತನಿಖೆಯಾಗಲಿ. ಆ ನಂತರ ಭದ್ರತಾ ವೈಫಲ್ಯ ಆಗಿದೆಯೋ, ಇಲ್ಲವೋ ಎನ್ನುವ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೇಳಿದರು.

ಈಗಾಗಲೇ ಪೊಲೀಸರು ಸಿಸಿ ಟಿವಿ, ವಿಡಿಯೋಗಳ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, ಯಾರು ಯಾರು ಈ ಗಲಭೆಯಲ್ಲಿ ಭಾಗಿಯಾಗಿದ್ದರೆ, ಗಲಾಟೆ ಮಾಡಿದ್ದಾರೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ೧೫ ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಉಳಿದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಇಡೀ ರಾಜ್ಯದಲ್ಲಿ ಗಣೋಶೋತ್ಸವಗಳು ಶಾಂತಿಯುತವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಈ ರೀತಿಯ ಗಲಾಟೆ ನಡೆದಿದೆ ಎಂದರೆ ಏನರ್ಥ, ಈ ಗಲಾಟೆಗೆ ಪ್ರಚೋದನೆ ನೀಡಿದವರು, ಭಾಗಿಯಾದವರನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ಗಣೇಶೋತ್ಸವದ ಸಂದರ್ಭದಲ್ಲಿ ಪೊಲೀಸರ ಭದ್ರತೆ ಒಂದು ಕಡೆಯಾದರೆ ಜನರು ಸಹ ಶಾಂತಿಯಿAದ ನಡೆದುಕೊಳ್ಳಬೇಕು. ಕಲ್ಲು ಎಸೆಯುವುದು, ಪ್ರಚೋದನೆ ಮಾಡುವುದು ಸರಿಯಲ್ಲ. ಇಂತಹ ಘಟನೆಗಳಿಂದ ಅನೇಕ ಬೆಳವಣಿಗೆಗಳಾಗುತ್ತವೆ. ಹಾಗಾಗಿ ಹೊರಗಡೆಯಿಂದ ಬಂದವರು ಈ ರೀತಿ ಗಲಾಟೆ ಮಾಡುವುದಾಗಲೀ, ಪ್ರಚೋದನೆ ಮಾಡುವ ಕೆಲಸವನ್ನಾಗಲೀ ಮಾಡಬಾರದು ಎಂದು ಹೇಳಿದರು.

ಯಾರೂ ಸಹ ಕಾನೂನು ಕೈಗೆತ್ತಿಕೊಳ್ಳಲು ನಾವು ಅವಕಾಶ ಕೊಡುವುದಿಲ್ಲ. ಒಂದು ವೇಳೆ ಈ ಗಲಾಟೆ ಪೂರ್ವನಿಯೋಜಿತ ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗುತ್ತದೆ ಎಂದರು.

ಮದ್ದೂರಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇಂದು ಎರಡು ಸಮುದಾಯದವರ ಶಾಂತಿ ಸಭೆ ಸಹ ಕರೆಯಲಾಗಿದೆ. ಎರಡು ಸಮುದಾಯದವರು ಸಹ ಶಾಂತಿಯುತವಾಗಿ ನಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗುತ್ತದೆ ಎಂದರು.

ಬಿಜೆಪಿ ನಿಯೋಗ ಮದ್ದೂರಿಗೆ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಹೋಗ್ಲಿ ಯಾರು ಬೇಡ ಅಂತಾರೆ, ಎಲ್ಲರೂ ಶಾಂತಿಗಾಗಿ ಪ್ರಯತ್ನಿಸಬೇಕು. ಸುಮ್ನೆ ಹೋಗೋದು, ಪ್ರಚೋದನೆ ಮಾಡೋದು ಅದನ್ನೆಲ್ಲ ಮಾಡಿದ್ರೆ ಸಹಿಸೋದಿಲ್ಲ ಎಂದು ಎಚ್ಚರಿಕೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !